ಮೈಸೂರು: ಮಾರ್ಚ್ 17ಕ್ಕೆ ಚುನಾವಣಾ ರಾಜಕಾರಣಕ್ಕೆ ಬಂದು 50 ವರ್ಷ, ಅದೇ ದಿನ ಬೃಹತ್ ಕಾರ್ಯಕ್ರಮ ಮಾಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಮುಂದೆ ಎಂದಿಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಇಂದು (ಶನಿವಾರ) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಯಾವ ಪಕ್ಷಕ್ಕೂ ಸಲಹೆ ಸೂಚನೆಗಳನ್ನು ನೀಡುವುದಿಲ್ಲ. ಎಲ್ಲ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿಯುವೆ. ಮಾರ್ಚ್ 17ಕ್ಕೆ ಚುನಾವಣೆ ರಾಜಕೀಯಕ್ಕೆ ಬಂದು 50 ವರ್ಷ. ಅದೇ ದಿನ ಬೃಹತ್ ಕಾರ್ಯಕ್ರಮ ಮಾಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡುವೆ ಎಂದರು.
ವಿಜಯೇಂದ್ರ ಮುಂದೆ ಬೆಟ್ಟದಷ್ಟು ಸವಾಲು: ಬಿಜೆಪಿ ಹೈಕಮಾಂಡ್ ಕೊನೆಗೂ ಗಜ ಪ್ರಸವ ಮಾಡಿದೆ. ಪ್ರತಿ ಪಕ್ಷದ ನಾಯಕನ ಆಯ್ಕೆ ಮಾಡಿ, ಗಜಮೋಕ್ಷ ಮಾಡಲಿ ಎಂದು ಹಾಸ್ಯಭರಿತವಾಗಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ವಿಜಯೇಂದ್ರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿರುಸಿನಿಂದ ಓಡಾಡುತ್ತಿವೆ. ಅದನ್ನು ತಡೆದು ಪಕ್ಷ ಸಂಘಟನೆ ಮಾಡಬೇಕಾಗಿದೆ. ಇಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆ ಇಲ್ಲ. ದೇವೇಗೌಡರು, ಸಿದ್ದರಾಮಯ್ಯ ಎಲ್ಲರೂ ಕುಟುಂಬ ರಾಜಕಾರಣ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ರಾಜಕಾರಣ ಮಾಡುತ್ತಾರೆ. ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ. ಲೋಕಸಭಾ ಚುನಾವಣೆಗೆ ವಿಜಯೇಂದ್ರ ಆಯ್ಕೆ ಅನುಕೂಲ ಆಗುತ್ತದೆ ಎಂದು ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಸ್ವಂತ ತೀರ್ಮಾನ, ಯಾವುದೇ ಒತ್ತಡ ಇರಲಿಲ್ಲ: ಸದಾನಂದಗೌಡ |
ಇತ್ತೀಚೆಗಷ್ಟೇ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ತಾವು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದರು. ಇವರ ಬಳಿಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕೂಡ ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ್ದ ಸದಾನಂದಗೌಡ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸೋಲಿಗೆ ನಮ್ಮ ಕೆಲವು ನಿರ್ಧಾರಗಳು ಕಾರಣವಾಗಿವೆ. ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ಪಕ್ಷದಲ್ಲಿ ನಾನೇ ಗರಿಷ್ಠ ಲಾಭವನ್ನು ಪಡೆದವನು. ನಾನು ಮತ್ತೆ ಅಧ್ಯಕ್ಷನಾಗುವ ಆಸೆಯಿಲ್ಲ. ಈ ಹಿಂದೆ ಸಿಎಂ ಆಗಿದ್ದೆ, ಕೇಂದ್ರ ಸಚಿವನಾಗಿದ್ದೆ, ಪಕ್ಷದ ಅಧ್ಯಕ್ಷ ಆಗಿದ್ದೆ ಇನ್ನೇನು ಬೇಕಿಲ್ಲ ನನಗೆ. ಸ್ವಂತ ಶಕ್ತಿಯಿಂದ ಬಿಜೆಪಿ ಕಟ್ಟುತ್ತೇವೆ. ಯಾರನ್ನೂ ಸೆಳೆಯೋದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕಾರಣದಕಿಂದ ದೂರ ಉಳಿಯುವುದಾಗಿ ತಿಳಿಸಿದ್ದರು.