ಮೈಸೂರು: ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ವಿಚಾರವಾಗಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮೈಶುಗರ್ ಕಾರ್ಖಾನೆ ಆರಂಭವಾಗಿ ರೈತರಿಗೆ ಅನುಕೂಲವಾಗಬೇಕು ಎನ್ನುವುದಕ್ಕೆ ನನ್ನ ಮೊದಲ ಆದ್ಯತೆ. ನನ್ನ ಹೋರಾಟ ರೈತರಿಗಾಗಿ. ಅವರ ಕಷ್ಟ ನಮಗೆ ಗೊತ್ತಿದೆ. ಪ್ರತಿ ವರ್ಷ ಕಬ್ಬು ಕಟಾವು ಸಂದರ್ಭದಲ್ಲಿ ಅವರಿಗೆ ತುಂಬಾ ಕಷ್ಟ ಆಗುತ್ತಿದೆ. ಈಗಾಗಲೇ ಎರಡು ಕಾರ್ಖಾನೆಗಳು ಮುಚ್ಚಿವೆ. ಆದರೆ ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.
ಇನ್ನೆರಡು ವರ್ಷದಲ್ಲಿ ಕಾರ್ಖಾನೆ ಓಪನ್ ಆಗುತ್ತದೆ ಎನ್ನಲಾಗುತ್ತಿದೆ. ಖಾಸಗೀಕರಣದಿಂದ ಯಾರಿಗೂ ಕಷ್ಟ ಆಗುವುದಿಲ್ಲ. ರೈತರಿಗೆ ಕಷ್ಟ ಆಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.
ಮೈಶುಗರ್ ಕಾರ್ಖಾನೆ ನಡೆಸಲು ಆಗುವುದಿಲ್ಲ ಎಂಬುದನ್ನ ಸಿಎಂ ಖುದ್ದಾಗಿ ಹೇಳಿದ್ದಾರೆ. ಕಾರ್ಖಾನೆಯ ಸಮಸ್ಯೆಗಳ ಬಗ್ಗೆಯೂ ಹೇಳಿದ್ದಾರೆ. ಈಗಾಗಲೇ 420 ಕೋಟಿ ರೂಪಾಯಿ ನಷ್ಟವಾಗಿದೆ. ಮತ್ತೆ ಅದನ್ನೇ ಮುಂದುವರಿಸಲು ಆಗುವುದಿಲ್ಲ ಎಂದಿದ್ದಾರೆ. ಸರ್ಕಾರದಿಂದಲೇ ಕಾರ್ಖಾನೆ ಮುಂದುವರಿಸಲು ಆಗದೆ ಇರುವಾಗ ಖಾಸಗಿಯವರಿಗೆ ನೀಡಿದರೆ ಏನೂ ಆಗುವುದಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.