ಮೈಸೂರು: ಸಂಸದ ಪ್ರತಾಪ್ ಸಿಂಹ ಯಾವುದೇ ಕೆಲಸ ಮಾಡದಿದ್ದರೂ, ಎಲ್ಲ ಕಡೆ ಹೋಗಿ ನಾನೇ ಕೆಲಸ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್, ಸಂಸದ ಪ್ರತಾಪ್ ಸಿಂಹ ನಾನೇ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯನ್ನು ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಇವರು ಎಕ್ಸ್ಪ್ರೆಸ್ ಹೈವೇಗೆ ಹೋದರೆ ಜನ ಇವರನ್ನು ಹೊಡೆಯುತ್ತಾರೆ. ಇವರು ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿದ್ದು, ದುಬಾರಿ ಟೋಲ್ನಿಂದ ಜನ ರೊಚ್ಚಿಗೆದ್ದಿದ್ದಾರೆ. ಇವರು ಹೋದರೆ ಜನ ಖಂಡಿತವಾಗಿಯೂ ಹೊಡೆಯುತ್ತಾರೆ ಎಂದು ಹೇಳಿದ್ದಾರೆ.
ಇನ್ನು ವಸ್ತು ಪ್ರದರ್ಶನದ ಆವರಣದಲ್ಲಿ 365 ದಿನ ಎಕ್ಸಿಬಿಷನ್ ಮಾಡುತ್ತೇನೆ ಹಾಗೂ ಶ್ರೀ ರಂಗಪಟ್ಟಣದಿಂದ ಕುಶಾಲನಗರದವರೆಗೆ ಹೆದ್ದಾರಿ ಮಾಡುತ್ತೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಅವರು ತಮ್ಮ ಕೆಲಸ ಬಿಟ್ಟು ಬೇರೆ ಎಲ್ಲವನ್ನೂ ಮಾಡುತ್ತಾರೆ ಎಂದು ಸಂಸದರ ವಿರುದ್ಧ ಹರಿಹಾಯ್ದರು.
ಹತ್ತು ಜನರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ: ಸ್ಪೀಕರ್ ಮುಂದೆ ಗಲಾಟೆ ಮಾಡಿದ ಹತ್ತು ಜನ ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ ಎಂದು ಆಗ್ರಹಿಸಿದ ಲಕ್ಷ್ಮಣ್, ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗಾಗಿ ಕಳುಹಿಸಲಾಗಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗಬಾರದು ಎಂದು ಗಲಾಟೆ ಮಾಡಲಾಗಿದೆ. ಜೆಡಿಎಸ್ನ ಎಚ್ ಡಿ. ಕುಮಾರಸ್ವಾಮಿ ಹತಾಶರಾಗಿ ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಮುಗಿದ ಅಧ್ಯಾಯ. ಯುಪಿಎ ಹಾಗೂ ಎನ್ಡಿಎ ಇಬ್ಬರೂ ಕರೆಯುತ್ತಿಲ್ಲ ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದರು.
ನಿನ್ನೆ ಜೆಡಿಎಸ್, ಬಿಜೆಪಿ ಗದ್ದಲದಿಂದ ಗೃಹ ಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗದಂತೆ ಈ ಗಲಾಟೆ ಮಾಡಲಾಗಿದೆ. ನಾಲ್ಕನೇ ಗ್ಯಾರಂಟಿ ಯೋಜನೆ ಗೃಹ ಲಕ್ಷ್ಮಿ 1 ಕೋಟಿ 60 ಲಕ್ಷ ಜನರಿಗೆ ತಲುಪಲಿದೆ. ಇದನ್ನು ದಿಕ್ಕು ತಪ್ಪಿಸಲು ನಿನ್ನೆ ಸದನದಲ್ಲಿ ಗಲಾಟೆ ಮಾಡಲಾಗಿದೆ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಸಾಧ್ಯವಾಗಿಲ್ಲ. ಮುಸ್ಲಿಮರು ಸ್ಪೀಕರ್ ಆಗಿದ್ದು, ದಲಿತರು ಡೆಪ್ಯೂಟಿ ಸ್ಪೀಕರ್ ಆಗಿದ್ದು, ಇದನ್ನು ಸಹಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಮೈಸೂರಿನಲ್ಲಿ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ ಎಂದು ಯತ್ನಾಳ್ ಕುಸಿದು ಬಿದ್ದಿದ್ದಾರೆ: ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ನಿನ್ನೆ ಕುಸಿದು ಬಿದ್ದಿದ್ದಾರೆ. ಯತ್ನಾಳ್ ನೋಡಲು ಸಿಎಂ ಸಮೇತ ಎಲ್ಲರೂ ಹೋಗಿದ್ದಾರೆ. ಇನ್ನೂ ಮೂರು ದಿನ ಇದೇ ನಡೆಯತ್ತದೆ ಎಂದು ಟೀಕಿಸಿದ ಲಕ್ಷ್ಮಣ್, ಸದನದಲ್ಲಿ ಇರುವವರೆಲ್ಲ ಬಹುತೇಕ ರೌಡಿಶೀಟರ್ಗಳು ಬಿಜೆಪಿಯಲ್ಲೇ ಇದ್ದಾರೆ. ಅವರ ನಡವಳಿಕೆಯನ್ನು ನೋಡಿದರೆ ಹಾಗೆಯೇ ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಹಿಂದಿನ ಸರ್ಕಾರದ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಬಸವರಾಜ ರಾಯರೆಡ್ಡಿ ಆಗ್ರಹ