ಮೈಸೂರು: ಸೋಮಣ್ಣನವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡು ರೆಡ್ಝೋನ್ ಎಂದು ಘೋಷಣೆ ಮಾಡಿ, ಅಷ್ಟು ಜನರನ್ನು ಹೋಮ್ ಕ್ವಾರಂಟೈನ್ ಮಾಡಿದ ಪರಿಣಾಮವಾಗಿ ಇವತ್ತು ಸೋಂಕಿತರ ಪ್ರಮಾಣ 30 ಕ್ಕಿಂತ ಕೆಳಗೆ ಇಳಿದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಷ್ಟು ಬೇಗ ನಿಯಂತ್ರಣಕ್ಕೆ ಬರಲು ಕಾರಣರಾದವರು ಯಾರು ಎಂಬುದನ್ನು ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಜೊತೆ ಮಾತನಾಡಿ ಹೇಳಿದ್ದು, ಕೊರೊನಾ ವೈರಸ್ನ್ನು ಇಷ್ಟು ಬೇಗ ನಿಯಂತ್ರಣಕ್ಕೆ ತಂದ ಶ್ರೇಯಸ್ಸನ್ನು ಆಗಿನ ಉಸ್ತುವಾರಿ ಸಚಿವರಾದ ಸೋಮಣ್ಣನವರು, ಜಿಲ್ಲಾಧಿಕಾರಿಗಳು, ಎಸ್ಪಿ ಅವರು ನಾವೆಲ್ಲಾ ಒಟ್ಟು ಕೂಳಿತುಕೊಂಡು ತೆಗೆದುಕೊಂಡ ನಿರ್ಧಾರವಾಗಿತ್ತು ಎಂದರು.
ಅದು ಹೇಗಿತ್ತು ಅಂದರೆ ಪಿ-52 ಅವರ ಪ್ರಾಥಮಿಕ ಸಂಪರ್ಕದ 11 ಜನರನ್ನು ಟೆಸ್ಟಿಂಗ್ ಮಾಡಿದ್ದಾಗ 9 ಜನ ಪಾಸಿಟಿವ್ ಎಂದು ತಿಳಿಯಿತು. ಪಾಸಿಟಿವ್ ಬಂದ ನಂತರ ತಕ್ಷಣ ಜುಬಿಲಂಟ್ ಕಾರ್ಖಾನೆಯ 1087 ಉದ್ಯೋಗಿಗಳು ಹಾಗೂ ಅವರ ಅಷ್ಟು ಕುಟುಂಬದವರನ್ನು ಕ್ವಾರಂಟೈನ್ ಮಾಡಿದ್ದೆವು. ಇವರನ್ನು ಹೋಮ್ ಕ್ವಾರಂಟೈನ್ ಮಾಡಿದಾಗ ಇನ್ನಿತರರಿಗೆ ಹರಡುವುದು ತಪ್ಪಿತ್ತು, ಕೊನೆಗೆ ನಮ್ಮಲ್ಲಿ ಟೆಸ್ಟಿಂಗ್ ಮಾಡುತ್ತಾ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಾ ಹೋಯಿತು ಎಂದರು.
ಆದರೆ, ಕಮ್ಯೂನಿಟಿ ಟ್ರಾನ್ಸ್ ಮೇಶನ್ ಆಗದೇ ಇರುವುದಕ್ಕೆ ಮುಖ್ಯ ಕಾರಣ, ಆವತ್ತು ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಇರಲಿಲ್ಲ , ರಾಜ್ಯ ಸರ್ಕಾರದ ಗೈಡ್ ಲೈನ್ಸ್ ಇರಲಿಲ್ಲ , ಸೋಮಣ್ಣನವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡು ರೆಡ್ಝೋನ್ ಎಂದು ಘೋಷಣೆ ಮಾಡಿ, ಅಷ್ಟು ಜನರನ್ನು ಹೋಮ್ ಕ್ವಾರಂಟೈನ್ ಮಾಡಿದ ಪರಿಣಾಮವಾಗಿ ಇವತ್ತು ನಮಗೆ ಸೋಂಕಿತರ ಪ್ರಮಾಣ 30 ಕ್ಕಿಂತ ಕೆಳಗೆ ಇಳಿದಿದೆ. 89 ಕ್ಕೆ ಹೋಗಿದ್ದರೂ ಕೂಡ ಕಡಿಮೆಯಾಗಿ ಈ ಸ್ಥಿತಿಗೆ ಬಂದಿದೆ ಎಂದ ಅವರು, ನನಗೆ ಅನಿಸುತ್ತದೆ ಇನ್ನು ನಾಲ್ಕೈದು ದಿನಗಳಲ್ಲಿ ಜೀರೊ ಹತ್ತಿರಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ. ಇವತ್ತು ಕೂಡ ಏಳೆಂಟು ಜನ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.