ಮೈಸೂರು: ಮರಗಳನ್ನು ಕಡಿದು ಯಾವುದೇ ರೂಪುರೇಷೆಗಳಿಲ್ಲದ ಹೆಲಿಟೂರಿಸಂ ಮಾಡಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ಕೆ ನನ್ನ ಹಾಗೂ ಮೈಸೂರಿಗರ ವಿರೋಧವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಲಲಿತ್ ಮಹಲ್ ಅರಮನೆ ಮುಂಭಾಗದ ಕಿರು ಅರಣ್ಯದ 600ಕ್ಕೂ ಅಧಿಕ ಮರಗಳನ್ನು ಕಡಿದು ಪ್ರವಾಸೋದ್ಯಮ ಇಲಾಖೆ ಹೆಲಿ ಟೂರಿಸಂ ಮಾಡಲು ಮುಂದಾಗಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೈಸೂರಿಗೆ ಯಾಕೆ ಹೆಲಿಟೂರಿಸಂ ಬೇಕು? ಸರಿಯಾದ ರೂಪುರೇಷೆಗಳಿಲ್ಲದೆ ಹೆಲಿಟೂರಿಸಂ ಮಾಡಲು ಯಾಕೆ ಮುಂದಾಗಿದ್ದೀರಿ? ಲಲಿತ್ ಮಹಲ್ ಅರಮನೆಯ ರಾಜರ ಹೆಲಿಪ್ಯಾಡ್ ಇದೆ. ಅದನ್ನೇ ಗುತ್ತಿಗೆ ಪಡೆಯಬಹುದು. ಅದು ಬಿಟ್ಟು ಮರ ಕಡಿದು ಹೆಲಿಪ್ಯಾಡ್ ಮಾಡುವ ಅವಶ್ಯಕತೆ ಏನಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಓದಿ : ಕೋವಿಡ್ ನಿಯಮ ಪಾಲಿಸಿದರೆ ಲಾಕ್ಡೌನ್ ಅವಶ್ಯಕತೆಯಿಲ್ಲ: ಸಂಸದ ಪ್ರತಾಪ್ ಸಿಂಹ
ಪ್ರವಾಸೋದ್ಯಮ ಇಲಾಖೆಯವರು ಯಾವುದೇ ರೂಪುರೇಷೆಗಳಿಲ್ಲದೆ ಪ್ರಚಾರಕ್ಕಾಗಿ ಬಣ್ಣದ ಕಾಗೆಗಳನ್ನು ಹಾರಿಸುತ್ತಿದ್ದೀರಿ. ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ನಂತರ ಹೆಲಿಟೂರಿಸಂ ಮಾಡಲು ರೂಪುರೇಷೆ ಸಿದ್ಧಪಡಿಸಿ. ಈಗ ಇರುವ ಮಹಾರಾಜರ ಜಾಗದಲ್ಲಿರುವ ಹೆಲಿಪ್ಯಾಡ್ ಅಥವಾ ವಿಮಾನ ನಿಲ್ದಾಣವನ್ನು ಉಪಯೋಗಿಸಿಕೊಳ್ಳಿ. ಅದನ್ನು ಬಿಟ್ಟು ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ನೂರಾರು ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲ . ಇದ್ದಕ್ಕೆ ನನ್ನ ಮತ್ತು ಸಾರ್ವಜನಿಕರ ವಿರೋಧ ಇದೆ ಎಂದರು.