ಮೈಸೂರು: 'ನನ್ನ ಕಾರು ಅಪಘಾತಕ್ಕೀಡಾಗಿದೆ ಎಂದು ಎಲ್ಲರೂ ಭಯಗೊಂಡಿದ್ದರು. ತುಂಬಾ ಮಂದಿ ನನಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಅಪಘಾತವಾದ ಕಾರು ನನ್ನದಲ್ಲ, ಅದು ಕೇರಳದವರ ಕಾರು' ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
'ಬೆಂಗಳೂರಿನಿಂದ ಮೈಸೂರಿಗೆ ವಾಪಸ್ ಬರುವಾಗ ಮದ್ದೂರಿನಲ್ಲಿ ಊಟ ಮಾಡಲೆಂದು ಕಾರು ನಿಲ್ಲಿಸಿದ್ದೆ. ಆಗ ಮೈಸೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿನ ಟೈಯರ್ ಸ್ಫೋಟಗೊಂಡು ನೂರು ಮೀಟರ್ ಮುಂದಕ್ಕೆ ಹೋಗಿ ಮಗುಚಿ ಬಿತ್ತು. ಕೂಡಲೇ ನಾನು, ನನ್ನ ಗನ್ ಮ್ಯಾನ್, ಚಾಲಕ ಕಾರಿನ ಬಳಿ ಹೋಗಿ ಅದರಲ್ಲಿದ್ದ ಗಂಡ, ಹೆಂಡತಿ, ಮಗಳು, ಚಾಲಕ ಸೇರಿ ನಾಲ್ವರನ್ನು ಹೊರಗೆಳೆದು ರಕ್ಷಿಸಿದೆವು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಸಂಚಾರಿ ಪೊಲೀಸರನ್ನು ಕರೆಯಿಸಿ ಮಹಜರು ಮಾಡಿಸಿದೆವು. ಕಾರಿನಲ್ಲಿದ್ದವರು ಕೇರಳದವರು. ಅವರಿಗೆ ಬೇರೊಂದು ಕಾರಿನ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಿ ಕೊಟ್ಟೆವು' ಎಂದು ಹೇಳಿದ್ದಾರೆ.
'ಅಪಘಾತವಾದರೂ ಯಾರೂ ವಾಹನಗಳನ್ನು ನಿಲ್ಲಿಸಲ್ಲ. ಜನರು ಸಂವೇದನೆ ಇಲ್ಲದೆ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿರುತ್ತಾರೆ. ಮಾನವೀಯ ದೃಷ್ಟಿಯಿಂದ ಅಪಘಾತವಾದಂತಹ ಸಮಯದಲ್ಲಿ ನೆರವಿಗೆ ಧಾವಿಸಿ' ಎಂದು ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಕಾರು ಅಪಘಾತ: ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾದ ಸಂಸದ ಪ್ರತಾಪ ಸಿಂಹ