ಮೈಸೂರು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಂಸದತ ಪ್ರತಾಪ್ ಸಿಂಹ ನಡುವೆ ಜಟಾಪಟಿ ಮುಂದುವರಿದಿದೆ.
ಇಂದು ಕೆ.ಆರ್. ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿ ಹೊಸದಾಗಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾನು ಕೇಳಿದ ಸುಮಾರು ಲೆಕ್ಕವನ್ನು ಜಿಲ್ಲಾಧಿಕಾರಿಗಳು ನೀಡಿಲ್ಲ. ಇದಕ್ಕೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಗೆ ನಾನು ಸುಮಾರು ಲೆಕ್ಕ ಕೇಳಿದ್ದೆ. ಯಾವುದೋ ಒಂದನ್ನು ಕೊಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಸ್ಟೆಪ್ ಡೌನ್ ಆಸ್ಪತ್ರೆಗೆ ಅನುಮತಿ ಕೊಟ್ಟಿದ್ದರೂ ಎಸ್.ಒ.ಪಿ. ಪಾಲನೆ ಮಾಡದೆ ಅನುಮತಿ ಕೊಟ್ಟಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕ ಹಣದಿಂದ ಸ್ವಿಮ್ಮಿಂಗ್ ಪೂಲ್ ಏಕೆ ಕಟ್ಟಿದ್ದೀರಿ, ಅದು ಯಾರ ಹಣ ಎಂದು ಸಾರ್ವಜನಿಕರು ಕೇಳುತ್ತಿದ್ದು ಅದಕ್ಕೆ ಉತ್ತರ ಕೊಡಿ. ಅದನ್ನು ಬಿಟ್ಟು, ಬೆಡ್ ಇಷ್ಟಾಯಿತು, ರೂಂ ರೆಂಟ್ ಎಷ್ಟಾಯಿತು, ಊಟಕ್ಕೆ ಇಷ್ಟಾಯಿತು ಎಂದು 2 ಕೋಟಿ, 4 ಕೋಟಿ, 3 ಕೋಟಿ, 5 ಕೋಟಿ ಎಂದು ಲೆಕ್ಕಾ ಕೊಟ್ಟರೆ ತಿಳಿಯದು. ಇದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಕೊಡಿ. ಇದು SDRF, NDRF ಫಂಡ್. ಇದು ಕೇಂದ್ರ ಸರ್ಕಾರದ ಫಂಡ್. ಅದಕ್ಕೆ ಲೆಕ್ಕ ಕೇಳುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ ಆದರು.
ಮೈಸೂರಿನಲ್ಲಿ ದಾನಧರ್ಮಕ್ಕೆ ಔದಾರ್ಯತೆಗೆ ಕೊರತೆಯಿಲ್ಲ. ಸಾರ್ವಜನಿಕರ ಹಣವನ್ನು ಪಾರದರ್ಶಕವಾಗಿ ಕಾಪಾಡಿಕೊಳ್ಳಬೇಕು. ಅದಕ್ಕೆ ಸಾರ್ವಜನಿಕರ ಮುಂದೆ ಯಾರು ಲೆಕ್ಕ ಕೋಡಬೇಕೋ ಅವರು ಕೊಡಲಿ ಎಂದು ಸಂಸದರು ಹೇಳಿದರು.
ಕೊರೊನಾ ಸಾವಿನ ಸಂಖ್ಯೆಯ ವ್ಯತ್ಯಾಸದ ಬಗ್ಗೆ ನಾನು ಜಿಲ್ಲಾಧಿಕಾರಿಯವರಿಗೆ ಹೇಳಿದ್ದೆ. ಅಲ್ಲದೆ ಆಕ್ಸಿಜನ್ ವಿಚಾರದಲ್ಲಿ ಮೈಸೂರನ್ನು ಕಟಕಟಗೆ ತಂದು ನಿಲ್ಲಿಸಿದ್ದರು. ರೆಮ್ಡಿಸಿವಿಯರ್ ಕೊರತೆ ಇದೆ ಎಂಬ ಕೂಗು ಕೇಳಿಬಂತು. ಇದರ ಜವಾಬ್ದಾರಿಯನ್ನು ನಾನು ತೆಗೆದುಕೊಂಡ ಮೇಲೆ ಎಲ್ಲೂ ತೊಂದರೆಯಾಗದಂತೆ ಕೆಲಸ ಮಾಡಿದ್ದೇನೆ. ಕೋವಿಡ್ 3ನೇ ಅಲೆ ಬರುವಷ್ಟರಲ್ಲಿ ಎಲ್ಲರಿಗೂ ವ್ಯಾಕ್ಸಿನೇಷನ್ ಹಾಕುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಖುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಲಾಕ್‌ಡೌನ್ ಮುಂದುವರೆಸಿದರೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಈ ದೃಷ್ಟಿಯಿಂದ ಮಾಸ್ ಕೋವಿಡ್ ಪರೀಕ್ಷೆಗಳನ್ನು ಹಾಗೂ ಮನೆ ಮನೆ ಸರ್ವೇ ಮಾಡಿಸಿ, ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಬೇಕು ಎಂದು ಸಂಸದರು ಹೇಳಿದರು.