ಮೈಸೂರು: ಕಾರಿನ ಟೈರ್ ಸ್ಫೋಟಗೊಂಡಿದ್ದು ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಗುಣಲಕ್ಷ್ಮಿ (35) ಹಾಗೂ ದೈವಿಕ್ (12) ಮೃತರು.
ಕಾರು ಚಾಲನೆ ಮಾಡುತ್ತಿದ್ದ ಮೃತ ಗುಣಲಕ್ಷ್ಮಿಯವರ ಪತಿ ಜಗದೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗದೀಶ್ ಕಾರು ಚಾಲನೆ ಮಾಡಿಕೊಂಡು ಪತ್ನಿ ಗುಣಲಕ್ಷ್ಮಿ ಹಾಗೂ ಪುತ್ರ ದೈವಿಕ್ ಜೊತೆಯಲ್ಲಿ ಮುಂಜಾನೆ 4.30ರ ಸಮಯದಲ್ಲಿ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದರು.
ಈ ವೇಳೆ ಟೈರ್ ಸ್ಫೋಟಗೊಂಡು ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಹೀಗಾಗಿ, ತಾಯಿ ಮತ್ತು ಮಗ ಕಾರಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಕುವೆಂಪು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.