ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಮುನ್ನಲೆಗೆ ತಂದಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಟೀಕಿಸಿದರು.
ಇಂದಿರಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಯೋಧರ ಸರ್ಜಿಕಲ್ ಸ್ಟ್ರೈಕ್ ಕುರಿತು ನಮ್ಮ ಅಪಸ್ವರವಿಲ್ಲ. ಆದರೆ ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಯೋತ್ಪಾದನೆ ಹೆಚ್ಚಿದ್ದು ಹೇಗೆ. ಉಗ್ರರು ಒಳಗೆ ನುಗ್ಗದಂತೆ ತೆಡೆಯುವ ಶಕ್ತಿ ಇವರಿಗೆ ಇರಲಿಲ್ಲವೆ. ನಮ್ಮ ಮಿಲಿಟರಿ ಮೇಲೆ ದಾಳಿ ಮಾಡುವಷ್ಟು ಭದ್ರತೆ ಲೋಪ ಉಂಟಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ರೈತರ ಕುರಿತು ಏನನ್ನೂ ಮಾಡದ ಮೋದಿ ಸರ್ಕಾರ ಕೊನೆ ಗಳಿಗೆಯಲ್ಲಿ ಚುನಾವಣೆ ಕಾರಣಕ್ಕೆ ರೈತರ ಖಾತೆಗೆ 6 ಸಾವಿರ ರೂಪಾಯಿ ಹಾಕಲು ಹೊರಟಿದೆ. ಇದು ರೈತರ ಕುರಿತ ನಿಜವಾದ ಕಾಳಜಿಯಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಮಾತುಗಳನ್ನು ಉಳಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಸೋತಿದೆ. ಅವರ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಧ್ರುವನಾರಾಯಣ್ ಎಂದರು.
ವಿ.ಶ್ರೀನಿವಾಸ್ ಪ್ರಸಾದ್‌ಗೆ ತಿರುಗೇಟು:
ಚುನಾವಣೆಯಲ್ಲಿ ಧ್ರುವನಾರಾಯಣ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಆಗಲಿದೆ ಎಂಬ ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸಮಯ ವ್ಯರ್ಥ ಮಾಡದೆ ಕೆಲಸ ಮಾಡಿದ್ದೇನೆ. ಅದೇ ನನ್ನ ಗೆಲುವಿನ ಅಸ್ತ್ರ. ಹೇಳಿಕೆ-ಪ್ರತಿ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ನಾನು ಕಾಯಕದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಶ್ರೀನಿವಾಸ್ ಪ್ರಸಾದ್‌ಗೆ ತಿರುಗೇಟು ನೀಡಿದರು.
ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರಿದ್ದು, ನನ್ನನ್ನು ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಬಿಎಸ್‌ಪಿ, ಬಿಜೆಪಿ ಸ್ಪರ್ಧಿಸಿದರೂ ಯಾವುದೇ ಭಯವಿಲ್ಲ ಎಂದು ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.