ಬೆಂಗಳೂರು: ''ಎಸ್ಸಿ-ಎಸ್ಟಿ ಶಾಸಕರು, ಸಚಿವರಿಗೆ ಆಯೋಜಿಸಲಾಗಿದ್ದ ಔತಣಕೂಟವನ್ನು ಮುಂದೂಡಿದ್ದೇವಷ್ಟೇ, ರದ್ದು ಮಾಡಿಲ್ಲ'' ಎಂದು ಗೃಹ ಸಚಿವ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಚಿತ್ರದುರ್ಗದಲ್ಲಿ ಎಸ್ಟಿ/ಎಸ್ಟಿ ಸಮಾವೇಶ ಮಾಡುವ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಔತಣಕೂಟದ ಬಗ್ಗೆ ನಾವು ದೆಹಲಿಗೆ ಏನೂ ಹೇಳಿರಲಿಲ್ಲ. ಶಾಸಕರ ಸಭೆ ಅಂದಾಗ ಅವರ ಗಮನಕ್ಕೆ ಹೋಗುತ್ತದೆ. ಹಾಗಾಗಿ, ರಣದೀಪ್ ಸುರ್ಜೇವಾಲ ಕರೆ ಮಾಡಿ ಅವರೂ ಸಹ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಅವರಿಗೂ ಆಹ್ವಾನ ಕೊಟ್ಟಿದ್ದೇವೆ. ಮುಂದೆ ಸಮಯ ಕೋಡುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ಔತಣಕೂಟ ಮುಂದೂಡಿದ್ದೇವೆ, ರದ್ದು ಮಾಡಿಲ್ಲ'' ಎಂದು ತಿಳಿಸಿದರು.
''ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ. ಊಟಕ್ಕೂ ಮೊದಲು ಚರ್ಚೆ ಮಾಡುತ್ತೇವೆ. ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡುತ್ತೀರಿ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಸ್ವಲ್ಪ ದಿನ ಕಾಯೋಣ, ಸಭೆ ಅವರಿಗೆ ಇಷ್ಟ ಇತ್ತೋ ಅಥವಾ ಇಲ್ಲವೋ ಎಂಬುದು ಎಲ್ಲವೂ ಗೊತ್ತಾಗುತ್ತದೆ. ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ. ಸಭೆಯನ್ನು ಮುಂದೂಡಿದ್ದೇವೆ ಅಷ್ಟೇ. ಸಭೆ ನಡೆಸುತ್ತೇವೆ'' ಎಂದರು.
ಹೈಕಮಾಂಡ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂತಹದ್ದೇನೂ ಇಲ್ಲ'' ಎಂದು ಹೇಳಿದರು.
''ದಲಿತ ಸಮುದಾಯಗಳ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕಿದೆ. ಯಾರೂ ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಹೇಳಿಲ್ಲ. ನಮ್ಮ ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ. ಸದ್ಯದ ಮಟ್ಟಿಗೆ ಸಭೆ ಮುಂದಕ್ಕೆ ಹಾಕಿದ್ದೇವೆ. ಮತ್ತೆ ದಿನಾಂಕ ನಿಗದಿ ಆದಾಗ ತಿಳಿಸುತ್ತೇವೆ. ಏನಾಗಿದೆ ಎಂದು ಎಲ್ಲವನ್ನೂ ಹೇಳಲು ಆಗುವುದಿಲ್ಲವಲ್ಲ'' ಎಂದು ಮಾರ್ಮಿಕವಾಗಿ ನುಡಿದರು.
ನಕ್ಸಲರು ಶರಣಾಗುತ್ತಿದ್ದಾರೆ ಎಂದಷ್ಟೇ ಹೇಳಬಹುದು: ''ನಕ್ಸಲರು ಶರಣಾಗುತ್ತಿದ್ದಾರೆ ಎಂದಷ್ಟೇ ಹೇಳಬಹುದು. ಬೇರೆ ಯಾವುದೇ ವಿಷಯ ಹೇಳಲು ಆಗುವುದಿಲ್ಲ. ಅವರ ಷರತ್ತುಗಳೇನು?, ನಾವು ಏನು ಭರವಸೆ ಕೊಟ್ಟಿದ್ದೇವೆ ಎಂಬುದು ನಂತರ ತಿಳಿಸುತ್ತೇವೆ'' ಎಂದು ಹೇಳಿದರು.
ಶರಣಾಗುತ್ತಿರುವ ನಕ್ಸಲಿಯರ ಮೇಲೆ ಸಾಕಷ್ಟು ಕೇಸುಗಳಿವೆ. ಅವರನ್ನು ಏಕೆ ಶರಣಾಗತಿ ಮಾಡಿಸಲಾಗುತ್ತಿದೆ ಎಂದು ಪ್ರತಿಪಕ್ಷದವರು ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ''ವಿಕ್ರಮ್ ಗೌಡ ಎನ್ಕೌಂಟರ್ ಆದಾಗ ನಾನೇ ನಕ್ಸಲಿಯರಿಗೆ ಶರಣಾಗುವಂತೆ ಕರೆ ಕೊಟ್ಟಿದ್ದೇನೆ. ನಮ್ಮ ಇಲಾಖೆ ಹಿರಿಯ ಅಧಿಕಾರಿಗಳು ಸಹ ಕೆಲಸ ಮಾಡಿದ್ದಾರೆ. ಕಾಡಿನಲ್ಲಿ ಇದ್ದು ಏಕೆ ಕಷ್ಟ ಅನುಭವಿಸುತ್ತೀರಿ, ಸಮಾಜದ ಮುಖ್ಯವಾಹಿನಿಯಲ್ಲಿ ಇರಿ ಎಂದು ನಾವೇ ಆಹ್ವಾನ ನೀಡಿದ್ದೆವು. ಹಾಗಾಗಿ, ಶರಣಾಗತಿಗೆ ಒಪ್ಪಿದ್ದಾರೆ. ಅವರ ಮೇಲೆ ಕೇಸ್ಗಳಿರುವುದು ನಿಜ. ಅವರು ಶರಣಾದ ನಂತರ ಅವರ ಮೇಲಿರುವ ಕೇಸ್ಗಳ ಬಗ್ಗೆ ಕಾನೂನಿನಲ್ಲಿ ಏನಿದೆ ಎಂದು ನೋಡುತ್ತೇವೆ'' ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಡಿನ್ನರ್ ಪಾಲಿಟಿಕ್ಸ್ : ಹೈಕಮಾಂಡ್ ಮಧ್ಯಪ್ರವೇಶ, ಸಚಿವ ಪರಮೇಶ್ವರ್ ಸಭೆ ರದ್ದು