ಮೈಸೂರು: ಮೋದಿ ಒಬ್ಬ ಮಹಾನ್ ನಾಟಕಕಾರ. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮೈತ್ರಿ ಪಕ್ಷಗಳ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಮುಖಂಡರು ಈ ಸಭೆಗೆ ಬಂದಿಲ್ಲ ಎಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕಾರಣಾಂತರಗಳಿಂದ ಅವರು ಈ ಸಭೆಗೆ ಬಂದಿಲ್ಲ. ನಮ್ಮ ಅಭಿಪ್ರಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋದು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ನರೇಂದ್ರ ಮೋದಿ 5 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಮೋದಿ ಎಂಬ ಮಹಾ ನಾಟಕಕಾರ, ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ಇದೇ ಹಾದಿಯಲ್ಲಿ ಸಾಗಿದ ಪ್ರತಾಪ್ ಸಿಂಹ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು ಎಂದು ಪುಸ್ತಕಗಳಲ್ಲಿ ಪ್ರಿಂಟ್ ಮಾಡಿ ಸುಳ್ಳು ಹೇಳಿಕೊಂಡ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡದಲ್ಲೊಬ್ಬ ಅನಂತಕುಮಾರ ಹೆಗಡೆ ಎಂಬ ಮತಾಂಧ ಸಂವಿಧಾನವನ್ನು ಬದಲಾಯಿಸಬೇಕು ಎಂದು ಹೇಳುತ್ತಾನೆ. ಒಬ್ಬ ಕೇಂದ್ರದ ಮಂತ್ರಿ ಈ ರೀತಿ ಮಾತನಾಡುತ್ತಾನೆ ಎಂದರೆ ಇದರ ಹಿಂದೆ ಮೋದಿ, ಅಮಿತ್ ಶಾ ಇದ್ದಾರೆ ಎಂದು ಅರ್ಥ. ಆದ್ದರಿಂದ ಇವರು ಸಮಾಜಕ್ಕೆ ಮಾರಕ ಕ್ಯಾನ್ಸರ್ ಇದ್ದಂತೆ. ಅದಕ್ಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಅದಕ್ಕಾಗಿ ಮಹಾಘಟಬಂಧನ ಸಿದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.