ಮೈಸೂರು: ಮೂರು ದಿನದಲ್ಲೇ ವರದಿ ಕೊಡುತ್ತೇನೆ ಎಂದು ಹೇಳಿರುವ ಪ್ರಾದೇಶಿಕ ಆಯುಕ್ತರ ವರದಿಯ ಮೇಲೆ ನಂಬಿಕೆಯಿಲ್ಲ ಎಂದು ಹೆಚ್. ವಿಶ್ವನಾಥ್ ಹೇಳಿದರು. ಶಾಸಕ ಸಾ.ರಾ.ಮಹೇಶ್ ಒಡೆತನದ ಸಾ.ರಾ. ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಶಾಸಕರು ಸ್ವತಃ ತಾವೇ ಪ್ರಾದೇಶಿಕ ಆಯುಕ್ತರ ಕಚೇರಿಯ ಮುಂದೆ ತನಿಖೆಗಾಗಿ ಆಗ್ರಹಿಸಿ ಒಂಟಿ ಪ್ರತಿಭಟನೆ ನಡೆಸಿದ್ದರು.
ಆ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತರು ಮೂರು ದಿನದಲ್ಲಿ ವರದಿ ಕೊಡುವುದಾಗಿ ಹೇಳಿದ್ದರು. ಈ ಬಗ್ಗೆ ಇಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಶ್ಚರ್ಯ ಹಾಗೂ ಅನುಮಾನ ವ್ಯಕ್ತಪಡಿಸಿದ್ದು, ಕೇವಲ ಮೂರು ದಿನದಲ್ಲಿ ವರದಿ ಕೊಡುವ ಬಗ್ಗೆ ನನಗೆ ನಂಬಿಕೆ ಇಲ್ಲ. ಇಲ್ಲಿ ಇಬ್ಬರ ನಡುವೆ ಒಳ ಒಪ್ಪಂದವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಮುನ್ನ 4 ಭೂ ಹಗರಣಗಳ ಬಗ್ಗೆ ಆದೇಶ ನೀಡಿದ್ದು, ಎಲ್ಲಾ ಭೂ ಹಗರಣಗಳ ಬಗ್ಗೆ ತನಿಖೆಯಾಗಬೇಕು. ಕೇವಲ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಸಾ.ರಾ.ಕಲ್ಯಾಣ ಮಂಟಪದ ಬಗ್ಗೆ ತನಿಖೆಯಾದರೆ ಸಾಲದು. ಆಗ ಅವರಿಗೆ ಪ್ರಾದೇಶಿಕ ಆಯುಕ್ತರು ಕ್ಲೀನ್ ಚಿಟ್ ನೀಡುತ್ತಾರೆ. ಅದನ್ನು ಹಿಡಿದುಕೊಂಡು ಎಲ್ಲವನ್ನು ಮುಚ್ಚುವ ಪ್ರಯತ್ನ ಮಾಡುತ್ತಾರೆ ಎಂದು ವಿಶ್ವನಾಥ್ ಆರೋಪಿಸಿದರು.
ಸಿಎಂಗೆ ಮನವಿ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಸರ್ಕಾರದ 3,667 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಅವರೇ ಮಾರಾಟ ಮಾಡಿದ್ದಾರೆ. ಯಾರಿಗೆ ಹೇಳಿ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು.