ಮೈಸೂರು: ಹುಣಸೂರು ದೇವರಾಜ ಅರಸು ಅವರ ಕರ್ಮಭೂಮಿ. ಹಿಂದಿನ ಸಿಎಂ ಯಡಿಯೂರಪ್ಪನವರು ಹುಣಸೂರು ಕ್ಷೇತ್ರವನ್ನು ನಿರ್ಲಕ್ಷಿಸಿದ್ದರು. ನೂತನ ಸಿಎಂ ಆಗಿರುವ ಬೊಮ್ಮಾಯಿ ಅವರ ತಂದೆಯ ಹಾದಿಯಲ್ಲಿ ಸಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿ ಆಗಿದ್ದರೂ ಹುಣಸೂರನ್ನು ನಿರ್ಲಕ್ಷ್ಯ ಮಾಡಿದ್ದು, ನಮ್ಮ ತಾಲೂಕಿಗೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾರೆ. ಇನ್ನಾದರೂ ತಾಲೂಕನ್ನು ನಿರ್ಲಕ್ಷಿಸದೆ ಅಭಿವೃದ್ಧಿ ಕೆಲಸಕ್ಕೆ ಸಹಾಯ ಮಾಡುವಂತೆ ಒತ್ತಾಯಿಸಿದರು.
ಹೆಚ್ಡಿ ಕೋಟೆ ಅಭಿವೃದ್ದಿಗೆ ಮನವಿ:
ಕಬಿನಿ ಜಲಾಶಯ ಭರ್ತಿಯಾಗಿದ್ದು, ಆಗಸ್ಟ್.10 ರಂದು ಜಲಾಶಯಕ್ಕೆ ಬಾಗಿನ ಅರ್ಪಿಸಲು ಹೊಸ ಮುಖ್ಯಮಂತ್ರಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಸರ್ಕಾರದಿಂದ ಲಭ್ಯವಾಗಿದೆ. ಸಿಎಂ ಬಂದಂತಹ ಸಮಯಯದಲ್ಲಿ ಹೆಚ್ಡಿ ಕೋಟೆಯಲ್ಲಿನ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸುವಂತೆ ಮನವಿ ಮಾಡಲಾಗುವುದು ಎಂದು ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಲು ಬಂದಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದು, ಅವರು ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಸಲಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದರು.