ಮೈಸೂರು: ಮೋದಿಯಂಥ ಹೇಡಿ ಪ್ರಧಾನಿಯನ್ನು ದೇಶದ ಇತಿಹಾಸದಲ್ಲಿ ನೋಡಿರಲಿಲ್ಲ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಂಜನಗೂಡು ತಾಲೂಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ 75 ದಿನದಿಂದ ಕೊರೆಯುವ ಚಳಿಯಲ್ಲಿಯೂ ರೈತರು ಪ್ರತಿಭಟಿಸುತ್ತಿದ್ದಾರೆ. ಆದರೆ ರೈತರ ಸಮಸ್ಯೆಗಳನ್ನು ಆಲಿಸಲು ಪ್ರಧಾನಿ ಕಿವಿಗೊಡುತ್ತಿಲ್ಲ. ಆದರೆ ಪ್ರತಿ ಭಾನುವಾರ ರೇಡಿಯೋನಲ್ಲಿ 'ಮನ್ ಕೀ ಬಾತ್' ಮಾತನಾಡುತ್ತಾರೆ ಎಂದು ಟೀಕಿಸಿದರು.
ಒಮ್ಮೆಯಾದರೂ ರೈತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಕಷ್ಟ ಕೇಳಲಿಲ್ಲ. ಮಾಧ್ಯಮಗಳ ಮುಂದೆ ಮಾತನಾಡಲ್ಲ. ಪ್ರಧಾನಿ ಮೌನಕ್ಕೆ ಶರಣಾಗಿರುವುದು ಇತಿಹಾಸದಲ್ಲಿ ಮೊದಲು. ಇಂಥ ಹೇಡಿ ಪ್ರಧಾನಿಯನ್ನು ದೇಶದಲ್ಲಿ ನೋಡಿರಲಿಲ್ಲ ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹವಾಗಲಿದೆ ಎಂದು ಹೆದರಿಸುತ್ತಾರೆ. ರೈತರ ಹೆಸರಿಗೆ ಮಸಿ ಬಳಿಯುತ್ತಿರುವ ಸರ್ಕಾರವನ್ನ ಇತಿಹಾಸ ಕಂಡಿಲ್ಲ. ಕೃಷಿ ಕಾಯ್ದೆಗಳು ಚೆನ್ನಾಗಿವೆ ಎನ್ನುತ್ತಾರೆ. ಆದರೆ 75 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ದಡ್ಡರೇ? ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದರು.
ಜನಸಾಮಾನ್ಯರು ಮತ್ತು ರೈತರು ಪ್ರತಿಭಟನೆ ಮಾಡಿದಾಗ ಸರ್ಕಾರ ಕೇಳಬೇಕು. ಆದರೆ ಈ ಸರ್ಕಾರಗಳಿಗೆ ಯಾವುದೇ ಮಾನವೀಯ ಮೌಲ್ಯಗಳಿಲ್ಲ ಎಂದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆ ಅಖಂಡವಾಗಿಯೇ ಉಳಿಯುವ ವಿಶ್ವಾಸವಿದೆ; ಶಾಸಕ ಸೋಮಶೇಖರ ರೆಡ್ಡಿ