ಮೈಸೂರು: ನಿಜವಾಗಿ ತಪ್ಪು ಮಾಡಿಲ್ಲ ಎಂದ ಮೇಲೆ ನ್ಯಾಯಾಲಯದ ಮೊರೆ ಹೋಗಬಾರದು. 'ಕಳ್ಳನ ಮನಸು ಹುಳ್ಳುಳ್ಳಗೆ' ಎನ್ನೋ ರೀತಿಯಲ್ಲಿ ಆಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿರುವ ಸಚಿವರ ಬಗ್ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದರು.
ಓದಿ: ಸಿಡಿ ಬಹಿರಂಗದ ಹಿಂದೆ ಯಾರ ನಾಯಕತ್ವ ಇದೆ ಎಂಬುದು ಶೀಘ್ರ ಬಹಿರಂಗ: ಸಚಿವ ಎಸ್.ಟಿ. ಸೋಮಶೇಖರ್
ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ, ಅವರು ಮಾಡಿರುವ ತಪ್ಪನ್ನೇ ವಿಡಿಯೋ ಮಾಡಿರಬಹುದು. ಮಾಧ್ಯಮಗಳಲ್ಲಿ ಪ್ರಸಾರ ಮಾಡಬಹುದು ಎಂಬ ಭೀತಿ ಅವರಿಗಿದೆ. ಇದೊಂದು ರೀತಿಯಲ್ಲಿ ನಿರೀಕ್ಷಣಾ ಜಾಮೀನು ಪಡೆದಂತಾಗಿದೆ. ಕಳ್ಳನ ಮನಸು ಹುಳ್ಳುಳ್ಳಗೆ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
ವೈಯಕ್ತಿಕ ವಿಷಯಗಳು ಸಾರ್ವಜನಿಕವಾಗಬಾರದು, ಇಂಥ ವಿಚಾರಗಳಿಗೆ ಕಾಮೆಂಟ್ ಕೂಡ ಮಾಡಬಾರದು. ಇದೊಂದು ಅಸಹ್ಯ ಹುಟ್ಟಿಸುವ ವಿಚಾರವಾಗಿದೆ. ಸಿಡಿ ಮಾಡೋದು ತಪ್ಪು, ಬ್ಲ್ಯಾಕ್ಮೇಲ್ ಮಾಡೋದು ತಪ್ಪು, ಸಿಡಿ ಮಾಡುವ ವಿಚಾರದಲ್ಲಿ ಭಾಗವಹಿಸುವುದು ತಪ್ಪು ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಿ ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದರು.
ಅಪ್ಪನ ವಿರುದ್ಧ ಘೋಷಣೆ ಕೂಗಿದವರಿಗೆ ಕ್ರಮ ಆಗಲೇಬೇಕು:
ಅಪ್ಪನ (ಸಿದ್ದರಾಮಯ್ಯ) ವಿರುದ್ಧ ಘೋಷಣೆ ಕೂಗಿದವರಿಗೆ ಕ್ರಮ ಆಗಲೇಬೇಕು, ಕ್ರಮ ಕೈಗೊಳ್ಳುವ ಹೈಕಮಾಂಡ್ ನಿರ್ಧಾರ ಸರಿ ಇದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೇಯರ್ ಚುನಾವಣೆ ವಿಚಾರದಲ್ಲಿ ನಂಬಿಕೆ ಇಟ್ಟು ಶಾಸಕ ತನ್ವೀರ್ ಸೇಠ್ಗೆ ಜವಾಬ್ದಾರಿ ನೀಡಲಾಗಿತ್ತು. ಸ್ಪಷ್ಟ ನಿರ್ದೇಶನ ನೀಡಿದ್ದರೂ ಅಪ್ಪನಿಗೆ ಹಿನ್ನಡೆ ಮಾಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ಮೈತ್ರಿಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ತನ್ವೀರ್ ಸೇಠ್ಗೆ ಹೈಕಮಾಂಡ್ ನೋಟಿಸ್ ಕೊಟ್ಟಿದೆ ಎಂದರು.
ಸಿಎಂ ಇಬ್ರಾಹಿಂ ನಿವಾಸಕ್ಕೆ ತನ್ವೀರ್ ಸೇಠ್ ಭೇಟಿ ವಿಚಾರವಾಗಿ ಮಾತನಾಡಿ, ಹೈಕಮಾಂಡ್ನಿಂದ ನೋಟಿಸ್ ಕೊಟ್ಟ ಬಳಿಕ ಬೆಂಬಲಕ್ಕಾಗಿ ಇಬ್ರಾಹಿಂ ಅವರನ್ನು ಭೇಟಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ. ಜಮೀರ್ ಅಹ್ಮದ್ ಗೆ ಹೆಚ್ಚಿನ ಆದ್ಯತೆ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಯಾರು ಪಕ್ಷದ ನಿಷ್ಠಾವಂತರು, ಮತ ಸೆಳೆಯುವ ಶಕ್ತಿ ಇದೆ, ಅಂತವರನ್ನು ಗುರುತಿಸಿ ಆದ್ಯತೆ ನೀಡುತ್ತಾರೆ. ಅದೇ ರೀತಿ ಆದ್ಯತೆ ಬೇಕು ಅಂದರೆ ಓಡಾಡಿ, ಪಕ್ಷಕ್ಕೆ ಲಾಭ ತರುವ ಕೆಲಸ ಮಾಡಬೇಕು ಎಂದರು.