ಮೈಸೂರು: ಕುರುಬರಿಗೆ ಎಸ್.ಟಿ. ಮೀಸಲಾತಿ ವಿಚಾರದಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿಯವರು ಮಠಾಧೀಶರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠಾಧೀಶರಿಗೂ ಬೇರೆ ದಾರಿ ಇಲ್ಲದೇ ಜನಾಂಗದ ಹೋರಾಟ ಅಂತ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಮಠಾಧೀಶರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕುರುಬರಿಗೆ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ ಅಂತ ತೋರಿಸಲು ಹೆಚ್.ಎಂ. ರೇವಣ್ಣ ಹೋಗಿದ್ದಾರೆ ಎಂದರು.
ಹೆಚ್.ಎಂ. ರೇವಣ್ಣ ಸೇರಿದಂತೆ ಮಠಾಧೀಶರೆಲ್ಲ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಸಮುದಾಯ ಹೋರಾಟ ಅಲ್ವ ಅಂತ ಮೀಸಲಾತಿ ವಿಚಾರದಲ್ಲಿ ಒಪ್ಪಿಗೆ ಸೂಚಿಸಿದ್ದರು. ಆದರೆ ಆರ್ಎಸ್ಎಸ್ ನಾಯಕರು ದೆಹಲಿಗೆ ಹೋಗಿ ಸಂತೋಷ್ ಭೇಟಿ ಮಾಡಿದ್ದಾರೆ. ಇದನ್ನು ಗಮನಿಸಿದರೆ ಕುರುಬರನ್ನು ಇಬ್ಬಾಗ ಮಾಡುವ ಹುನ್ನಾರವಿದೆ ಎಂದು ಹೇಳಿದರು.
ಓದಿ: ವಿಶಿಷ್ಟ ಫ್ಯಾಷನ್ ಶೋ ನಡೆಸಿ ಕೋವಿಡ್ನಿಂದ ಭಯಪಡದಂತೆ ಸಂದೇಶ ಸಾರಿದ ವೈದ್ಯರು, ಮಾಡೆಲ್ಗಳು!
ನಿಜವಾಗಿ ಹಾಗೂ ಪ್ರಾಮಾಣಿಕವಾಗಿ ಕುರುಬರಿಗೆ ಎಸ್.ಟಿ. ಮೀಸಲಾತಿ ಸಿಗಬೇಕಾದರೆ, ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ. ಕೇಂದ್ರಕ್ಕೆ ಶಿಫಾರಸು ಮಾಡಲು ನಾವು ಕೂಡ ದೆಹಲಿಗೆ ಬರುತ್ತೇವೆ. ಸಚಿವ ಸಂಪುಟದಲ್ಲಿ ಬಿಜೆಪಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಆಗ ನಾವು ನಮ್ಮ ಹೋರಾಟವನ್ನು ಶುರು ಮಾಡುತ್ತೇವೆ. ಅದನ್ನು ಬಿಟ್ಟು ಸಮುದಾಯವನ್ನು ಒಡೆಯುವ ಕೆಲಸ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.