ಮೈಸೂರು: ಸಮುದಾಯಗಳ ಓಲೈಕೆ ಮತ್ತು ಪ್ರಶ್ನಾತೀತ ನಾಯಕನಾಗಲು ಲಿಂಗಾಯತ ವೀರಶೈವ ಅಭಿವೃದ್ಧಿ ಪ್ರಾಧಿಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಚಿಸಿದ್ದಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಧಾರವಿಲ್ಲದೆ, ವೈಜ್ಞಾನಿಕವಾಗಿ ಅಧ್ಯಯನ ನಡೆಸದೆ ಪ್ರಾಧಿಕಾರಗಳನ್ನು ರಚನೆ ಮಾಡುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಮೀಕ್ಷೆ ಮಾಡಿ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ಅನುಕೂಲ ಆಗುತ್ತದೆ. ಆದರೆ ಸಮುದಾಯಗಳ ಓಲೈಕೆಗಾಗಿ ಪ್ರಾಧಿಕಾರ ರಚನೆ ಮಾಡುವುದು ತರವಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಸ್ಥಾನಕ್ಕೆ ಸಂಚಕಾರ ಕಾಣಿಸುತ್ತಿದೆ. ಭಿನ್ನಮತದ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ಸಮುದಾಯಗಳ ಓಲೈಕೆಗಾಗಿ ಯಡಿಯೂರಪ್ಪ ಮುಂದಾಗಿದ್ದಾರೆ. ಅವೈಜ್ಞಾನಿಕವಾಗಿ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚನೆ ಮಾಡಬಾರದು. ಇಂತಹ ಕೆಟ್ಟ ಸಂಪ್ರದಾಯಕ್ಕೆ ಅಂತ್ಯ ಹಾಡಬೇಕು ಎಂದರು.
ಪ್ರಾಧಿಕಾರಗಳನ್ನು ರಚನೆ ಮಾಡುತ್ತಾ ಹೋದರೆ ಎಲ್ಲಾ ಸಮುದಾಯಗಳು ಪೈಪೋಟಿ ಮೇಲೆ ಪ್ರಾಧಿಕಾರ ಕೇಳುತ್ತವೆ. ಎಲ್ಲದಕ್ಕೂ ಹಣ ಕೊಡಲು ಸಾಧ್ಯವಿಲ್ಲ. ಇದರಿಂದ ಅಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದರು.