ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಹೇಳಿದ ಹಾಗೆ ನಡೆಯುತ್ತಿದೆ ಅನ್ನೋದಾದ್ರೆ, ನೀವು ಬಿಜೆಪಿಯಲ್ಲಿದ್ದು ಏನೂ ಸಾಧನೆ ಮಾಡೋಕೆ ಆಗಲ್ಲ. ಕಾಂಗ್ರೆಸ್ಗೆ ಬನ್ನಿ ಅಂತಾ ಬಹಿರಂಗವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆಹ್ವಾನಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಯತ್ನಾಳ್ ಅಧಿಕಾರದಲ್ಲಿದ್ದೂ ಮೂಲೆಗುಂಪಾಗಿದ್ದಾರೆ. ಅವರು ಪ್ರತಿಪಕ್ಷ ಸತ್ತಿದೆ ಅಂತಾರೆ. ಆದರೆ, ಇಂದು ಪ್ರತಿಪಕ್ಷ ಬದುಕಿದೆ, ಆಡಳಿತ ಪಕ್ಷ ಸತ್ತಿದೆ ಎಂದು ಟಾಂಗ್ ಕೊಟ್ಟರು.
ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ. ನಾವೆಲ್ಲಾ ಶೀಘ್ರದಲ್ಲೇ ಮುಸ್ಲಿಂ ಲೆಜಿಸ್ಟ್ರೇಟೀವ್ ಫೋರಂನಿಂದ ಸಭೆ ನಡೆಸುತ್ತೇವೆ. ಸಭೆಯಲ್ಲಿ ಸಿಎಂ ಇಬ್ರಾಹಿಂ ಅಸಮಾಧಾನದ ಬಗ್ಗೆ ಸತ್ಯವನ್ನು ಹುಡುಕುತ್ತೇವೆ. ಅವರು ಎಲ್ಲಿಯೂ ಹೋಗಲ್ಲ ಅಂತಾ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಅವರು ನಮ್ಮ ಜೊತೆ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಳ್ಳಬೇಕು. ಇಬ್ರಾಹಿಂ ಜತೆ ಈಗಾಗಲೇ ರಂದೀಪ್ ಸುರ್ಜೇವಾಲಾ ಮಾತನಾಡಿದ್ದಾರೆ ಎಂದರು.
ರಾಷ್ಟ್ರ ಮಟ್ಟದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ವಾತಾವರಣ ಸರಿಯಿಲ್ಲ. ಹೀಗಿರುವಾಗ ನಾನು ನನ್ನ ವಿಚಾರದಲ್ಲಿ ಆಲೋಚನೆ ಮಾಡುವ ಬದಲು ಸಮುದಾಯದ ಬಗ್ಗೆ ಆಲೋಚನೆ ಮಾಡಬೇಕು. ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬಲ ತುಂಬುವ ಕೆಲಸ ಮಾಡಬೇಕು. ಇಬ್ರಾಹಿಂ ವಿಚಾರದಲ್ಲಿ ಮಿಸ್ ಕಮ್ಯುನಿಕೇಷನ್ ಆಗ್ತಿದೆ. ಅವರು ಮಾತನಾಡುವುದು ಒಂದು, ಹೊರಗೆ ಬರುತ್ತಿರುವುದು ಮತ್ತೊಂದು. ಶೀಘ್ರದಲ್ಲೇ ಸಭೆ ನಡೆಸಿ ಅವರ ಅಸಮಾಧಾನಕ್ಕೆ ಕಾರಣ ಹುಡುಕುತ್ತೇವೆ. ಬಳಿಕ ಪಕ್ಷದ ವರಿಷ್ಠರೊಂದಿಗೆ ಮಾತನಾಡಲು ಅನುಕೂಲವಾಗುತ್ತೆ ಎಂದು ಹೇಳಿದರು. ರೋಷನ್ ಬೇಗ್ ವಿಚಾರದಲ್ಲಿ ಏನೇನ್ ಆಗಿದೆ, ಅವರಿಗೆ ಅಲ್ಲಿ ಹೋದಾಗ ಯಾವ ಸ್ಥಾನಮಾನ ಸಿಕ್ಕಿದೆ ಅನ್ನೋದು ಗೊತ್ತಿರುವ ವಿಚಾರ. ಇಬ್ರಾಹಿಂ ಪಕ್ಷ ಬಿಡದಂತೆ ಮನವೊಲಿಸುತ್ತೇವೆ ಎಂದಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಬಂದ ಬಳಿಕ ಹಿರಿಯ ಮುಸ್ಲಿಂ ನಾಯಕರ ಕಡೆಗಣನೆ ವಿಚಾರವಾಗಿ ಮಾತನಾಡುತ್ತಾ, ನಮಗೆ ಆದ್ಯತೆ ಕೊಡಬೇಕಿರುವುದು ಪಕ್ಷ. ವ್ಯಕ್ತಿಯಲ್ಲ. ಇನ್ನೂ ಸಾವಿರ ಜನ ಬರಲಿ, ಯಾರೋ ಒಬ್ಬರಿಂದ ನಾನು ಮೂಲೆ ಗುಂಪಾಗಲ್ಲ. ನಾನು ಮುಖ್ಯವಾಹಿನಿಯಲ್ಲೇ ಇದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.
ಸಿಎಂ ವಿರುದ್ಧ ಬ್ಲಾಕ್ ಮೇಲ್ ಸಿಡಿ ಆರೋಪ ವಿಚಾರವಾಗಿ ಮಾತನಾಡಿ, ರಾಜಕಾರಣಿಗಳ ವಿರುದ್ಧ ಸಿಡಿ ಬಾಂಬ್‌ಗಳು ಸಹಜ.
ನನ್ನ ವಿರುದ್ಧವೇ ಗ್ರಂಥಪಾಲಕರಿಂದ ಕೋಟ್ಯಂತರ ರೂ. ಲಂಚ ಸ್ವೀಕಾರದ ಸಿಡಿ ಬಾಂಬ್ ಸಿಡಿಸಿದ್ರು. ಹೀಗಾಗಿ ಅವರ ವೈಯುಕ್ತಿಕ ಹೇಳಿಕೆಗಳು ಅಷ್ಟು ಮಹತ್ವದ್ದಲ್ಲ ಎಂದು ತನ್ವೀರ್ ಸೇಠ್ ಹೇಳಿದ್ರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಎಂದು ಉದ್ಧವ್ ಠಾಕ್ರೆ ಟ್ವೀಟ್ ಮಾಡಿರುವುದು ದೇಶದ್ರೋಹಿಗಳು ಮಾಡುವ ಕೆಲಸ. ಏಕೀಕರಣದ ಬಳಿಕ ನಮ್ಮ ಒಂದಿಂಚೂ ಭೂಮಿ ಬೇರೆಯವರಿಗೆ ಕೊಡುವೆ ಪ್ರಶ್ನೆಯೇ ಇಲ್ಲ. ಗಡಿಭಾಗಗಳ ಅಭಿವೃದ್ಧಿಗಾಗಿ ಸುವರ್ಣಸೌಧ ಕಟ್ಟಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಅಲ್ಲಿ ಅಧಿವೇಶನಗಳೇ ನಡೆದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಎಂಬುದು ಕೇವಲ ನೆಪ ಎಂದು ಅಸಮಾಧಾನ ಹೊರ ಹಾಕಿದರು.
ಇತ್ತೀಚೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಕೇವಲ ರಾಜಕೀಯ ವಿಷಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ನಮ್ಮ ರಾಜ್ಯ, ನೆಲ, ಜಲ, ಭಾಷೆ ಮೇಲೆ ಅಭಿಮಾನ ಇರಬೇಕು. ಈ ವಿಚಾರದಲ್ಲಿ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು ಎಂದು ಸೇಠ್ ಸಲಹೆ ನೀಡಿದ್ರು.