ಮೈಸೂರು : ಶಾಸಕ ಜಿ ಟಿ ದೇವೇಗೌಡರು ಒಂದು ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷ ಸೇರ್ಪಡೆ ಸಾಧ್ಯವಿಲ್ಲ. ಅಸೆಂಬ್ಲಿ ಚುನಾವಣೆಗೆ 18 ತಿಂಗಳು ಇದೆ. ನಂತರ ಬರುವ ದಿನಗಳಲ್ಲಿ ನಮಗೆ ಒಂದು ಶಕ್ತಿಯಾಗಿ ಬರುವುದಾದರೆ ಖಂಡಿತಾ ಸ್ವಾಗತಿಸುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಪಕ್ಷದ ಹಾಗೂ ನಗರದ ಹಿತಕ್ಕಾಗಿ ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಮಾತುಕತೆ ಮುಂದುವರೆದಿದೆ. ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈಗಾಗಲೇ ಆರ್ ಧ್ರುವ ನಾರಾಯಣ್ ಹಾಗೂ ವರಿಷ್ಠರಿಗೆ ಮಾಹಿತಿ ನೀಡಿದ್ದು, ಬರುವ ಆದೇಶವನ್ನು ಪ್ರಕಟ ಮಾಡುತ್ತೇನೆ ಎಂದರು.
ನಮ್ಮ ಜಾತ್ಯಾತೀತ ನಿಲುವು ಇರುವುದು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು. ಹಾಗಾಗಿ, ಅವರ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಆದರೆ, ನಮ್ಮ ಜೊತೆ ಕೈ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಜೆಡಿಎಸ್ ನವರು ಮೇಯರ್ ಸ್ಥಾನ ಬಿಟ್ಟುಕೊಡಿ ಎಂದು ಕೇಳುತ್ತಿದ್ದಾರೆ.
ನಾವು ಕಾಂಗ್ರೆಸ್ ಗೆ ಬಿಟ್ಟು ಕೊಡಿ ಮುಂದಿನ ವರ್ಷ ನಿಮಗೆ ಬಿಟ್ಟು ಕೊಡುವುದಾಗಿ ಹೇಳಿದ್ದೇವೆ. ಹಾಗಾಗಿ, ಅಧಿಕಾರ ಹಂಚಿಕೆ ಕುರಿತು ಕೆಲ ಜಿಜ್ಞಾಸೆ ಇದೆ. ಅದನ್ನು ಸರಿಪಡಿಸುತ್ತೇವೆ. ಕಳೆದ ಬಾರಿಯು ಕೊನೆ ಕ್ಷಣದಲ್ಲಿ ತೀರ್ಮಾನ ಆಗಿತ್ತು. ಒಳ್ಳೆಯದು ನಿರೀಕ್ಷೆ ಇದೆ ಎಂದರು.
ನಮಗೆ ಅಧಿಕಾರ ಮುಖ್ಯ ಅಲ್ಲ ತತ್ವ ಸಿದ್ಧಾಂತ ಮುಖ್ಯ. ಹಾಗಾಗಿ, ಆ ನಿಲುವಿನಲ್ಲಿ ಮುಂದುವರೆಯುತ್ತಿದ್ದೇನೆ. ಸದನದೊಳಗಡೆ ಇರುವ ಅವಕಾಶವನ್ನು ಜನ ಆದೇಶ ಮಾಡಿದ್ದಾರೆ. ಆ ಆಶೀರ್ವಾದ ಇರುವುದರಿಂದ ಸದನದೊಳಗೆ ಆಗುವಂತಹ ಪರಿಸ್ಥಿತಿಯ ಅನುಗುಣವಾಗಿ ನಾವೇನು ಮಾಡಬೇಕು ನೋಡುತ್ತೇವೆ. ಬಿಜೆಪಿಯನ್ನು ಅಧಿಕಾರಿದಿಂದ ದೂರವಿಡುವ ಪ್ರಯತ್ನ ಕೊನೆ ಕ್ಷಣದವರೆಗೆ ಇರುತ್ತದೆ. ತನ್ವೀರ್ ಒಳ್ಳೆಯದು, ಕೆಟ್ಟದ್ದು ಎರಡಕ್ಕೂ ಗುರಿಯಾಗಿದ್ದು, ಸಮರ್ಥನೆ ಮಾಡಿಕೊಳ್ಳುವ ಶಕ್ತಿ ಇದೆ ಎಂದರು.
ಇದನ್ನೂ ಓದಿ : ಅತ್ಯಾಚಾರ ಸಂತ್ರಸ್ತೆ ಆರೋಗ್ಯ ಸ್ಥಿರ.. ಇಂಥಾ ದುರ್ಘಟನೆಗಳು ಮರುಕಳಿಸದಂತೆ ಕ್ರಮ: ಸಚಿವ ಸೋಮಶೇಖರ್