ಮೈಸೂರು: ಬಿjಬಿಜೆ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರಗೆ ಎಂಎಲ್ಸಿ ಚುನಾವಣೆಯ ಟಿಕೆಟ್ ತಪ್ಪಿದ್ದು ಒಂದು ಕಡೆ ಅಸಮಾಧಾನವಾದರೆ ಮತ್ತೊಂದೆಡೆ ಖುಷಿ ಆಗ್ತಿದೆ ಎಂದು ಶಾಸಕ ಹರ್ಷವರ್ಧನ್ ಹೇಳಿದ್ದಾರೆ. ವಿಧಾನಪರಿಷತ್ ನಾಮನಿರ್ದೇಶಿತ ಸ್ಥಾನ ವಿಜಯೇಂದ್ರ ಅವರ ಕೈ ತಪ್ಪಿದೆ. ಹೈಕಮಾಂಡ್ ವಿಜಯೇಂದ್ರ ಪರ ಒಲವು ತೋರಿಸಿಲ್ಲ. ವಿಜಯೇಂದ್ರ ಅಭಿಮಾನಿಗಳಿಗೆ ಇದರಿಂದ ಭಾರಿ ನಿರಾಸೆಯಾಗಿದೆ. ಆದರೆ, ನಂಜನಗೂಡು ಶಾಸಕ ಹರ್ಷವರ್ಧನ್ ತಮ್ಮದೇ ಆದ ದೃಷ್ಟಿಕೋನದಲ್ಲಿ ಈ ಬೆಳವಣಿಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಂಜನಗೂಡಿನಲ್ಲಿ ದರ್ಶನ ಪದವೀಧರ ಕ್ಷೇತ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಭವಿಷ್ಯದ ನಾಯಕರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಬೇಡಿಕೆ ಇದೆ. ವಿಧಾನಸಭೆ ಪ್ರವೇಶಿಸಬೇಕೆನ್ನುವುದು ಅಲ್ಲಿನ ಜನರ ಆಕಾಂಕ್ಷೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆನ್ನುವುದೂ ಸಹ ನಮ್ಮ ಅಭಿಪ್ರಾಯ. ಈ ಹಿನ್ನೆಲೆ ಎಂಎಲ್ಸಿ ಸ್ಥಾನದ ಟಿಕೆಟ್ ಕೈ ತಪ್ಪಿದ್ದು ಒಂದು ಕಡೆ ಖುಷಿಯೇ ಆಗಿದೆ ಎಂದು ಹೇಳಿದರು.
ಇಂದು ಹಿನ್ನಡೆ ಆಗಿರಬಹುದು. ಆದ್ರೆ ವಿಜಯೇಂದ್ರ ಶಕ್ತಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಮುಂದೆ ಅವರಿಗೆ ಉತ್ತಮ ಭವಿಷ್ಯವಿದೆ. ಯುವ ನಾಯಕರಾಗಿರುವ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು. ಉಪಚುನಾವಣೆಯಲ್ಲಿ ಅವರ ಪಾತ್ರ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆ ಅಂದ್ರೆ ಅದು ವಿಜಯೇಂದ್ರರಿಂದಲೇ. ಆದ್ದರಿಂದ ವರುಣಾ ಕ್ಷೇತ್ರಕ್ಕೆ ಬಿ ವೈ ವಿಜಯೇಂದ್ರ ಸ್ಪರ್ಧಿಸಿದ್ರೆ ಬಹಳ ಸಂತೋಷ ಎಂದು ತಿಳಿಸಿದರು.
ಓದಿ: ವಿಧಾನಸೌಧಕ್ಕೆ ಬರಲು ಹೆಲಿಕಾಪ್ಟರ್, ಎಸ್ಕಾರ್ಟ್ ಬಳಸಿಲ್ಲ: ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್