ಮೈಸೂರು: "ಮಾಜಿ ಶಾಸಕ ಪುಟ್ಟರಾಜು ಜೆಡಿಎಸ್ನ ಕೋರ್ ಕಮಿಟಿಯ ಸದಸ್ಯರಾಗಿದ್ದು, ನಿನ್ನೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಜೆಡಿಎಸ್ನಲ್ಲೇ ಇದ್ದುಕೊಂಡು ಪಕ್ಷ ಬಲವರ್ಧನೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ" ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ನ ಯಾವೊಬ್ಬ ಶಾಸಕರು, ಮುಖಂಡರು ಪಕ್ಷ ತೊರೆಯುವುದಿಲ್ಲ. ಕಾಂಗ್ರೆಸ್ ಪಕ್ಷ 135 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕೆರೆ ಇದೀಗ ತುಂಬಿ ತುಳುಕಾಡುತ್ತಿದ್ದು, ಭರ್ತಿಯಾಗಿದೆ. ಬೇರೆಯವರನ್ನು ಸೇರಿಸಿಕೊಂಡರೆ ಕೆರೆ ಒಡೆದು ಹೋಗುತ್ತದೆ" ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
"ಈಗಾಗಲೇ ಕಾಂಗ್ರೆಸ್ನ ಹಲವು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿಯವರೇ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಮುನಿಯಪ್ಪನವರು ಎರಡುವರೆ ವರ್ಷಕ್ಕೆ ಹಿರಿಯರೆಲ್ಲ ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದು ಹೇಳುತ್ತಾರೆ. ಕಾಂಗ್ರೆಸ್ನಿಂದ ನಮಗೆ ಯಾವ ಆಫರ್ ಬಂದಿಲ್ಲ. ನಮ್ಮ ಗುರಿ ದೇವೇಗೌಡರು ಇರುವವರೆಗೂ ಪಕ್ಷ ಸಂಘಟನೆಗೆ ಮಾಡುವುದಾಗಿದೆ" ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಯಾರೊಂದಿಗೂ ಹೊಂದಾಣಿಕೆ ಇಲ್ಲ: "ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದೊಂದಿಗೆ ಸ್ಪರ್ಧಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಒಂದು ಸೀಟು ಗೆಲ್ಲುತ್ತಿವೋ, ಐದು ಸೀಟು ಗೆಲ್ಲುತ್ತಿವೋ, ಹತ್ತು ಸೀಟು ಗೆಲ್ಲುತ್ತಿವೋ ಗೊತ್ತಿಲ್ಲ. ಆದರೆ ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ಪರ್ಧಿಸಲಿದೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ನಮಗೆ ಹೊಂದಾಣಿಕೆಯ ಅವಶ್ಯಕತೆ ಇಲ್ಲ. ನಮ್ಮ ಶಕ್ತಿಯ ಅನುಸಾರ ಸ್ಪರ್ಧಿಸುತ್ತೇವೆ. ಮಾಜಿ ಸಚಿವ ಸಾ.ರಾ ಮಹೇಶ್, ಪುಟ್ಟರಾಜು ಸೇರಿದಂತೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಪಕ್ಷ ಸೂಚಿಸಿದರೆ ನಾನು ಕೂಡ ಸ್ಪರ್ಧಿಸಲು ಸಿದ್ಧನಿದ್ದೇನೆ" ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ವರ್ಸಸ್ ಜಿ.ಟಿ ದೇವೇಗೌಡ ಎಂದು ಬಿಂಬಿಸಲಾಗುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯನವರು ರಾಜ್ಯಾದ್ಯಂತ ಬೆಳೆದಿದ್ದಾರೆ ಅವರದ್ದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೈಟಿಂಗ್, ಅವರೊಂದಿಗೆ ನನ್ನನ್ನು ಏಕೆ ಹೋಲಿಸುತ್ತೀರಿ. ಸಿದ್ದರಾಮಯ್ಯ ವರ್ಸಸ್ ನರೇಂದ್ರ ಮೋದಿ" ಎಂದರು. ತಮಿಳುನಾಡಿಗೆ ನೀರು ಬಿಡುತ್ತಿರುವ ವಿಚಾರವಾಗಿ ಮಾತನಾಡಿ, "ತಮಿಳುನಾಡಿಗೆ ನೀರಿನ್ನು ಬಿಡಬಾರದು, ನಮಗೆ ಕುಡಿಯಲು ನೀರಿಲ್ಲ, ರೈತರ ಬೆಳೆಗಳಿಗೆ ನೀರಿಲ್ಲ ಎಂದು ಹೋರಾಟ ಮಾಡುತ್ತಿದ್ದೇವೆ" ಎಂದರು.
ಇದನ್ನೂ ಓದಿ: ಮೋದಿಗಾಗಿ ವಾಪಸ್ ಬನ್ನಿ: ಬಿಜೆಪಿ ಬಿಟ್ಟು ಹೋದವರಿಗೆ ಬಹಿರಂಗ ಆಹ್ವಾನ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ