ಮೈಸೂರು: ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಕೇರ್ ಸೆಂಟರ್ ಅನ್ನು ಮುಚ್ಚಬಾರದು. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್-19ರ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 4,351 ಕೋವಿಡ್ ಪ್ರಕರಣಗಳು ಇದ್ದು, ಶೇ 61ರಷ್ಟು ಜನರು ಹೋಂ ಐಸೋಲೇಷನ್ನಲ್ಲಿದ್ದಾರೆ. ಅವರನ್ನು ಕೋವಿಡ್ ಕೇರ್ ಸೇಂಟರ್ಗೆ ದಾಖಲಿಸಿ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆಯೋ ಅಂತಹ ಸ್ಥಳಗಳನ್ನು ಮೈಕ್ರೋ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಬೇಕು. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ 20 ಪ್ರದೇಶಗಳನ್ನು ಗುರುತಿಸಿದ್ದು, ಅವುಗಳಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ಬನ್ನೂರು ಸಹ ಸೇರಿವೆ ಎಂದರು.
ಇದನ್ನು ಓದಿ: ರಾಜ್ಯದಲ್ಲಿ SSLC ಪರೀಕ್ಷೆ ಬರೆಯಲಿದ್ದಾರೆ ಮಹಾರಾಷ್ಟ್ರದ 500 ವಿದ್ಯಾರ್ಥಿಗಳು; ವಿದ್ಯಾರ್ಥಿಗಳಿಗೆ ಆತಂಕ
ಪಿರಿಯಾಪಟ್ಟಣ ತಾಲೂಕಿನಲ್ಲಿ 468 ಪ್ರಕರಣಗಳಿದ್ದರೆ, ಬನ್ನೂರಿನಲ್ಲಿ 97 ಪ್ರಕರಣಗಳಿವೆ. ಇವುಗಳನ್ನು ಕೋವಿಡ್ ಮೈಕ್ರೋ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಬೇಕು. ಇಲ್ಲಿ ಕೋವಿಡ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಆಸ್ಪತ್ರೆ ಕಾವಲು, ಹನಗೂಡು ಹಾಗೂ ಸೀಹಳ್ಳಿಯಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಇದರ ಬಗ್ಗೆ ಜಿಲ್ಲಾ ಪಂಚಾಯಿತಿಯ ಸಿಇಒ ನಿಗಾ ಇಡಬೇಕು ಎಂದು ಹೇಳಿದರು.
ಕೋವಿಡ್ 3ನೇ ಅಲೆ ಬಂದರೆ ವೈದ್ಯರ ಸಮಸ್ಯೆ ಕಾಡಬಾರದು ಎಂಬ ನಿಟ್ಟಿನಲ್ಲಿ 31 ಜನ ವೈದ್ಯರನ್ನು ಹಾಗೂ 11 ಸ್ಪೆಷಲಿಷ್ಟ್ ವೈದ್ಯರನ್ನು ನೇಮಿಸಲಾಗಿದೆ. ಇದರ ಜೊತೆಗೆ 174 ಹೆಚ್ಚುವರಿ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ. ಲಸಿಕೆಯು ದೇಶದ ಹಾಗೂ ರಾಜ್ಯದ ಪ್ರತಿಯೊಬ್ಬರಿಗೂ ಸಿಗಬೇಕು. ಲಸಿಕೆಯನ್ನು ನೀಡುತ್ತಿರುವುದರಲ್ಲಿ ರಾಜ್ಯವು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಶೀಘ್ರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ನೀಡಲು ಕೋರಲಾಗುವುದು ಎಂದು ತಿಳಿಸಿದರು.