ಮೈಸೂರು: ಹಸಿರು ಪಟಾಕಿ ಬಗ್ಗೆ ನನಗೂ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಬಗ್ಗೆ ನಮ್ಮ ಇಲಾಖೆಯಿಂದ ಸಿಎಂಗೆ ತಜ್ಞರ ಸಮಿತಿ ವರದಿ ಕೊಟ್ಟಿದ್ದು, ಅದನ್ನು ಸಿಎಂಗೆ ನೀಡಿದ್ದೇವೆ. ಆ ವರದಿಯಲ್ಲಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯನ್ನು ಮಾತ್ರ ಉಪಯೋಗಿಸಬೇಕೆಂದು ವರದಿ ನೀಡಿದ್ದು, ಬೇರೆ ಪಟಾಕಿಯನ್ನು ಉಪಯೋಗಿಸಬಾರದು. ದೀಪಾವಳಿ ದಿನ ರಾತ್ರಿ 8 ರಿಂದ 10 ಗಂಟೆ ಸಮಯ ಈ ಪಟಾಕಿ ಸಿಡಿಸಲು ಸಮಯ ನೀಡಲಾಗಿದೆ ಎಂದ ಸಚಿವರು, ಹಸಿರು ಪಟಾಕಿ ಎಂದರೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ, ಹಸಿರು ಪಟಾಕಿ ಎಂದರೆ ನನಗೂ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಆರ್.ಆರ್.ನಗರದ ಗ್ರೌಂಡ್ ರಿಪೋರ್ಟ್ ತಿಳಿಯಲು ಕಾಂಗ್ರೆಸ್ ಫೈಲ್:
ಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಮುನಿರತ್ನ 50,000 ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದೆ. ಈಗ ಚುನಾವಣಾ ಫಲಿತಾಂಶದಲ್ಲಿ ಅದು ಸಾಬೀತು ಆಗಿದೆ. ಕೋವಿಡ್ ಸಂದರ್ಭದಲ್ಲಿ ಆರ್.ಆರ್.ನಗರದ ಗ್ರೌಂಡ್ ರಿಪೋರ್ಟ್ ತಿಳಿಯಲು ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಡಿ.ಕೆ. ಬ್ರದರ್ಸ್ ಇಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರ ಮೇಲೆ ನಾನು ಆಪಾದನೆ ಮಾಡುವುದಿಲ್ಲ. ಕಾಂಗ್ರೆಸ್ನವರು ಒಟ್ಟಾಗಿ ಆರ್.ಆರ್.ನಗರದ ಗ್ರೌಂಡ್ ರಿಪೋರ್ಟ್ ತಿಳಿದುಕೊಳ್ಳಲು ವಿಫಲರಾಗಿದ್ದು, ಅಲ್ಲಿನ ರಿಯಾಲಿಟಿ ಅವರಿಗೆ ಅರ್ಥ ಆಗಿಲ್ಲ ಎಂದರು.
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುವುದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟ ವಿಚಾರ. ನಮಗೆ ಅದರ ಉಸಾಬರಿ ಬೇಡ, ಎಲ್ಲರಿಗೂ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂಬ ಹೇಳಿಕೆಗೆ ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದು ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ರಾಜಕೀಯ ಪ್ರಚಾರ ಸಭೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿರುವುದು ದುರಾದೃಷ್ಟಕರ. ಏನು ಮಾಡೋದು ಕೋರ್ಟ್ ಸಹ ಇದ್ದನ್ನೇ ಹೇಳಿದೆ. ಕಠಿಣ ಕ್ರಮಗಳನ್ನು ಸೂಚಿಸಿದ್ದರೂ ಉಲ್ಲಂಘನೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಕೋವಿಡ್ ಕೇಸ್ಗಳು ಸುಮಾರು 12ರಿಂದ 19% ಕಡಿಮೆಯಾಗಿದ್ದು , ಕೇವಲ 2% ಮಾತ್ರ ಸಕ್ರಿಯ ಇದೆ. ವ್ಯಾಕ್ಸಿನ್ ಬರುವವರೆಗೂ ನಾವು ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಲಸಿಕೆಗೆ ಎರಡು ಟ್ರಯಲ್ ಆಗಿದ್ದು, ಮೂರನೇ ಟ್ರೈಯಲ್ ಕೂಡ ನಡೆಯುತ್ತಿದ್ದು, ಕಡಿಮೆ ಅವಧಿಯಲ್ಲಿ ವ್ಯಾಕ್ಸಿನ್ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.