ಮೈಸೂರು : ಉಸ್ತುವಾರಿ ಸಚಿವರಾಗಿ ಬೆಂಗಳೂರನ್ನು ನಿಭಾಯಿಸಲು ಆರ್.ಅಶೋಕ್ ಸಮರ್ಥವಾಗಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಪಾದಿಸಿದರು.
ಬೆಂಗಳೂರು ಉಸ್ತುವಾರಿಗಾಗಿ ಆರ್ ಅಶೋಕ್ ಹಾಗೂ ವಿ ಸೋಮಣ್ಣ ನಡುವೆ ಜಟಾಪಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಅಶೋಕ್ ಹಿರಿಯ ನಾಯಕರಾಗಿದ್ದು, ಮೂಲ ಬಿಜೆಪಿಗರಾಗಿದ್ದಾರೆ.
ನಾವೆಲ್ಲ ಹೊರಗಿನಿಂದ ಬಂದು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಿದ್ದೇವೆ. ಆರ್ ಅಶೋಕ್ ಪ್ರಭಾವಿ ನಾಯಕರಾಗಿದ್ದಾರೆ. ಬೆಂಗಳೂರು ಉಸ್ತುವಾರಿಯನ್ನು ನಿಭಾಯಿಸಲು ಸಮರ್ಥರಿದ್ದಾರೆಂದು ಹೇಳಿದರು.
ಯಡಿಯೂರಪ್ಪರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆದಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಐಟಿ ದಾಳಿಯ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ. ಅವರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆದಿಲ್ಲ. ಐಟಿ ದಾಳಿ ನಿರಂತರ ಪ್ರಕ್ರಿಯೆಯಾಗಿದೆ. ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕರು ಮಾಡುತ್ತಿರುವ ಆರೋಪಗಳು ನಿರಾಧಾರ ಎಂದರು.
ಐಟಿ ದಾಳಿ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾನಗಲ್ನಲ್ಲಿ ಮಾಜಿ ಸಚಿವ ದಿವಂಗತ ಸಿ ಎಂ ಉದಾಸಿ ಕುಟುಂಬಕ್ಕೆ ಟಿಕೆಟ್ ತಪ್ಪಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಟಿಕೆಟ್ ಹಂಚಿಕೆ ಹೈಕಮಾಂಡ್ ತೀರ್ಮಾನವಾಗಿದೆ. ಹೈಕಮಾಂಡ್ ತೀರ್ಮಾನವನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಮೈಸೂರಿನಲ್ಲಿ ನುರಿತ ಕಲಾವಿದರಿಂದ ಸಿದ್ದಗೊಳ್ಳುತ್ತಿರುವ ಸ್ತಬ್ಧ ಚಿತ್ರಗಳ ತಯಾರಿ ಸ್ಥಳಕ್ಕೆ ಭೇಟಿ ನೀಡಿ ಸಚಿವ ಎಸ್ ಟಿ ಸೋಮಶೇಖರ್ ಪರಿಶೀಲಿಸಿದರು.