ಮೈಸೂರು: ಕಳೆದ 3 ದಿನಗಳಿಂದ ಮೈಸೂರಿನ ಬೆಳವಣಿಗೆ ನೋಡಿ ನನಗೆ ತುಂಬಾ ನೋವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪರಿಸರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಆಯುಕ್ತೆ ಕಿತ್ತಾಟ ವಿಚಾರದಲ್ಲಿ ಆದ ಬೆಳವಣಿಗೆಗಳು ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಆ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಈ ಗೊಂದಲಕ್ಕೆ ಮುಖ್ಯಮಂತ್ರಿಗಳು ಅಂತ್ಯ ಹಾಡಲಿದ್ದಾರೆ ಎಂದರು.
ಡಿಸಿ ಹಾಗೂ ಆಯುಕ್ತೆ ನಡುವಿನ ಕಿತ್ತಾಟದದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಾನು ಹೇಳುವುದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಸಂಜೆ ನಾನು ಬೆಂಗಳೂರಿಗೆ ಹೋಗಿ ಸಿಎಸ್ ಅವರಿಂದ ಮಾಹಿತಿ ಪಡೆಯುತ್ತೇನೆ. ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ಹೇಳಿದರು.
ರಾಜೀನಾಮೆಗೆ ಸಿದ್ಧ: ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೊರೊನಾ ಮುಕ್ತ ಜಿಲ್ಲೆ ಮಾಡಲು ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಆಗಿರುವ ಗೊಂದಲಕ್ಕೆ ನಾನು ಕಾರಣನಲ್ಲ. ನನ್ನನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ನನ್ನ ರಾಜೀನಾಮೆಯಿಂದ ಮೈಸೂರು ಕೊರೊನಾ ಮುಕ್ತವಾಗುವುದಾದರೆ ನಾನು ಅದಕ್ಕೂ ರೆಡಿ ಎಂದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲು ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪರಿಶ್ರಮ ಕಾರಣವೇ ಹೊರತು ಒಬ್ಬ ವ್ಯಕ್ತಿಯಿಂದ ಆಗಿಲ್ಲ ಎಂದು ಜಿಲ್ಲಾಧಿಕಾರಿಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಓದಿ : ಶಿಲ್ಪಾನಾಗ್ ಒಳ್ಳೆಯ ಆಫೀಸರ್, ರೋಹಿಣಿ ಸಿಂಧೂರಿ ಬಗ್ಗೆ ನನಗೆ ಗೊತ್ತಿಲ್ಲ: ಸಚಿವ ಈಶ್ವರಪ್ಪ