ಮೈಸೂರು: ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಕನಸು ಬಿದ್ದಿರಬೇಕು. ಅವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವಷ್ಟು ಬೆಳೆದಿಲ್ಲ. ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ (Minister S.T.Somashekar) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದ ರಾಜ್ ಉದ್ಯಾನವನದ ಮುಂಭಾಗದಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಬಿಟ್ ಕಾಯಿನ್(Bitcoin) ಪ್ರಕರಣದಲ್ಲಿ ಸಿಎಂ ತಲೆದಂಡದ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ದೆಹಲಿಯಲ್ಲಿ ಉತ್ತರ ನೀಡಿದ್ದಾರೆ. ಕಾನೂನು ಕ್ರಮ ಹಾಗೂ ತನಿಖೆಯ ನಂತರ ಸಂಪೂರ್ಣ ಸತ್ಯ ಬಹಿರಂಗವಾಗಲಿದೆ ಎಂದರು.
ಸಿಎಂ ಒಳ್ಳೆಯ ಕೆಲಸ ಮಾಡಿ ಯಶಸ್ವಿಯಾಗಿ ನೂರು ದಿನ ಪೂರೈಸಿದ್ದಾರೆ. ಇಂತಹ ಸಮಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿಎಂ ಬದಲಾವಣೆಯ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ಪ್ರಿಯಾಂಕ್ ಖರ್ಗೆ ಬೆಳೆದಿಲ್ಲ. ಅವರ ತಂದೆ ಹಿರಿಯರಿದ್ದಾರೆ, ಅವರೆಲ್ಲಾ ಇರುವಾಗ ಈ ಜೂನಿಯರ್ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ನ 25 ಸ್ಥಾನಗಳನ್ನು ಗೆಲ್ಲುತ್ತೇವೆ. ಮೈಸೂರು- ಚಾಮರಾಜನಗರ ಎರಡೂ ಸೀಟ್ಗಳಲ್ಲಿ ಒಂದು ಅಭ್ಯರ್ಥಿಯನ್ನು ಹಾಕುತ್ತೇವೆ. ಇದರಲ್ಲಿ ಮೂರು ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲಾಗಿದ್ದು, ಒಬ್ಬರ ಹೆಸರು ಅಂತಿಮವಾಗಲಿದೆ ಎಂದು ತಿಳಿಸಿದರು.
ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ ಭಾಗವಹಿಸಿದ್ದರೆ ಅವರು ಕಾಂಗ್ರೆಸ್ಗೆ ಹೋಗುತ್ತಾರೆ ಅಥವಾ ಬಿಜೆಪಿಗೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಕ್ಷೇತ್ರದ ಶಾಸಕರು. ವೇದಿಕೆಯಲ್ಲಿ ಹಳೆಯ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ಸಚಿವ ಸಿ.ಸಿ.ಪಾಟೀಲ್ ನಾಡಿದ್ದು ತಜ್ಞರೊಂದಿಗೆ ಬಂದು ಚಾಮುಂಡಿ ಬೆಟ್ಟದ ಕುಸಿತದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಇಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬಿಟ್ ಕಾಯಿನ್ ವಿಚಾರವಾಗಿ ಸಿಎಂ ಇಡಿಗೆ ವಹಿಸಿದ ತನಿಖೆ ವಿವರ ನೀಡಲಿ: ಡಿಕೆಶಿ