ಮೈಸೂರು: ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಜೊತೆಗೆ ನಿಫಾ ವೈರಸ್ ಕೇಸ್ಗಳು ಹೆಚ್ಚಾಗುದ್ದು, ಮೈಸೂರು ಹಾಗೂ ಚಾಮರಾಜನಗರದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಸುವಂತೆ ಡಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಸಚಿವರು ಪ್ರಕಟಣೆ ಹೊರಡಿಸಿದ್ದು, ಕೇರಳ ರಾಜ್ಯ ಸಂಪರ್ಕಿಸುವ ಚಾಮರಾಜನಗರದ ಗಡಿಭಾಗದಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಮೂಲೆಹೊಳೆ, ಕೆಕ್ಕನಹಳ್ಳ ಚೆಕ್ಪೋಸ್ಟ್ಗಳಲ್ಲಿ ತಪಾಸಣಾ ಕಾರ್ಯವನ್ನು ಇನ್ನಷ್ಟು ಹೆಚ್ಚಿಸಬೇಕು. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಂಡು ಹೆಚ್ಚಿನ ನಿಗಾ ವಹಿಸಿದರೆ ರಾಜ್ಯಕ್ಕೆ ನಿಫಾ ವೈರಸ್ ಹರಡದಂತೆ ತಡೆಯಲು ಸಾಧ್ಯವಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗಡಿ ಪ್ರದೇಶಗಳ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರ ತಪಾಸಣೆ ನಡೆಸಬೇಕು. ನಿಫಾ ಸೋಂಕಿನ ಲಕ್ಷಣ ಇರುವ ಪ್ರವಾಸಿಗರು, ಪ್ರಯಾಣಿಕರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಅವರಿಂದ 72 ಗಂಟೆಗಳ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು.
ಸೂಕ್ತ ತಪಾಸಣೆ ಹಾಗೂ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಂಡ ವಿದೇಶಿ ಮಹಿಳಾ ಪ್ರಜೆಗಳ ಸುಳಿವು ಇನ್ನೂ ನಿಗೂಢ!