ಮೈಸೂರು: ಸಿಎಂ ಯಡಿಯೂರಪ್ಪನವರು ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿರುವುದು ನನಗೆ ಬೇಸರ ತಂದಿದೆ. ಭಾವನಾತ್ಮಕವಾಗಿ ಯಡಿಯೂರಪ್ಪ ಈ ರೀತಿ ಮಾತನಾಡಿದ್ದಾರೆ ಹೊರತು, ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು 17 ಜನ ಅನರ್ಹರು ಬಿಜೆಪಿಗೆ ಬರುತ್ತಾರೆ ಎಂದು ಹೇಳಿಲ್ಲ. ಇರುವ ವಾಸ್ತವ ಅಂಶವನ್ನು ಹೇಳಿದ್ದಾರೆ. ಆ ಆಡಿಯೋ ಏಕೆ ವೈರಲ್ ಆಯಿತು ಗೊತ್ತಿಲ್ಲ. ವೈರಲ್ ಆಗಿರುವುದು ದುರದೃಷ್ಟಕರ ನನಗೆ ಬೇಸರ ತರಿಸಿದೆ ಎಂದರು.
ಇನ್ನೂ ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದಲೇ ನಾವು ಅಧಿಕಾರ ನಡೆಸಲು ಸಾಧ್ಯವಾಗಿದೆ ಎಂಬ ವಿಚಾರವನ್ನು ಯಡಿಯೂರಪ್ಪ ಹೇಳಿದ್ದಾರೆ. ಮುಂದಿನದನ್ನು ನಮ್ಮ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಇನ್ನೂ ರಾಜ್ಯ ಸರ್ಕಾರಕ್ಕೆ ಇಂದಿಗೆ ಅಧಿಕಾರಕ್ಕೆ ಬಂದು 100 ದಿನವಾಗಿದ್ದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಚರ್ಚೆಗೆ ಸಿದ್ದನಿದ್ದೇನೆ. ಅವರ ಕಾಲದಲ್ಲಿ 100 ದಿನದಲ್ಲಿ ಆಗಿರುವುದು ಏನು ನಮ್ಮ ಕಾಲದಲ್ಲಿ ಆಗಿರುವುದು ಏನು ಎಂಬುದನ್ನು ಚರ್ಚೆ ಮಾಡೋಣ ಎಂದು ಮಾತನಾಡಿದ ಸಚಿವ ಸೋಮಣ್ಣ,
ನಮ್ಮ ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆದಿಲ್ಲ, ನಾನು ಒಂದೇ ಒಂದು ವರ್ಗಾವಣೆಗೆ ಸಹಿ ಮಾಡಿಲ್ಲ ಎಂದರು.
ಅನರ್ಹ ಶಾಸಕರ ಬಗ್ಗೆ ಶಾಸಕ ಉಮೇಶ್ ಕತ್ತಿ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ನಮ್ಮ ಸಿಎಂ ಏನು ಹೇಳುತ್ತಾರೆ ಎಂಬುದೇ ಮುಖ್ಯ. ಸಿಎಂ ನಮಗೆ ಒಂದು ಶಕ್ತಿ ಅವರ ಹೇಳಿಕೆ ನಮಗೆ ಮುಖ್ಯ ಎಂದರು.