ಮೈಸೂರು: ಯಾವ ಯಾವ ಸರ್ಕಾರದ ಅವಧಿಯಲ್ಲಿ ಕೋಮಗಲಭೆ ಮಾಡುತ್ತಿದ್ದರು ಎಂಬುವುದು ಮಾಜಿ ಸಿಎಂ ಸಿದ್ದರಾಮಯ್ಯಗೂ ಗೊತ್ತು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಈಡಿ ದೇಶವನ್ನ ಗೂಂಡಾ ರಾಜ್ಯವನ್ನಾಗಿ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನ ಹಾಗೂ ಸರ್ಕಾರಗಳನ್ನ ಬೀಳಿಸಲು ಕಾಂಗ್ರೆಸ್ ಏನು ಮಾಡಿದೆ ಎಂಬುವುದು ಸಿದ್ದರಾಮಯ್ಯರಿಗೆ ಗೊತ್ತು. ನಮ್ಮ ಸರ್ಕಾರ ಇರುವ ಕಡೆ ಶಾಂತಿ, ಸೌಹಾರ್ದ, ಪ್ರಗತಿ ಮಾತ್ರ ಇರಲಿದೆ ಎಂದು ಕುಟುಕಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ದೊರಕದೇ ಇರುವ ವಿಚಾರಕ್ಕೆ ಪ್ರತಕ್ರಿಯೆ ನೀಡಿ, ಸಂಶೋಧನಾ ವಿದ್ಯಾರ್ಥಿ ಕಾನೂನಿನ ವ್ಯವಸ್ಥೆಯೊಳಗೆ ಏನು ಸಿಗಬೇಕು ಎಲ್ಲ ಸಿಕ್ಕಿದೆ. ರೂಪಿಸಲಾಗಿರುವ ಯೋಜನೆಯು ಉಪಯೋಗವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ ಎಂದರು.
ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 35 ಸಾವಿರ ಸೀಟ್ ಗಳು ಇವೆ. 25ಸಾವಿರ ಸೀಟುಗಳು ಭರ್ತಿಯಾಗಿವೆ. ಉಳಿದ ಸೀಟುಗಳನ್ನು ಭರ್ತಿ ಮಾಡುವ ಪ್ರಯತ್ನ ಮಾಡುತ್ತೇವೆ. ಯುವಕರಿಗೆ ಕೌಶಲ್ಯಯುತ ಕೋರ್ಸ್ಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.