ಮೈಸೂರು: ನಾಯಕತ್ವ ಬದಲಾವಣೆಗೆ ಸಮಯ ಇದಲ್ಲ. ಜೊತೆಗೆ ಪರ-ವಿರೋಧ ಸಹಿ ಸಂಗ್ರಹವೂ ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಚಿವರ ಸಭೆ ಕರೆಯಲಾಗಿದೆ. ನಾನೂ ಸಭೆಗೆ ಹೋಗುತ್ತಿದ್ದೇನೆ. ಅಲ್ಲಿ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿ ಮಾತನಾಡುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಈಗ ಸಚಿವರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವ ಸಮಯವಲ್ಲ. ಕೊರೊನಾದಿಂದ ಇಡೀ ಜಗತ್ತೇ ಸಂಕಷ್ಟಕ್ಕೆ ಸಿಲುಕಿದೆ. ಇದು ಮುಗಿದ ನಂತರ ಮಾತನಾಡಬಹುದು. ಹೊರಗಿನಿಂದ ಬಂದವರಿಂದಲೇ ಗೊಂದಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಮೊದಲಿನಿಂದಲೂ ನಮ್ಮ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಮನೆಗೆ ಸೊಸೆ ಬಂದ ನಂತರ ಅವಳು ಮನೆ ಮಗಳೇ. ಇಂದು ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದಲ್ಲಿರುವ ಗೊಂದಲಗಳನ್ನು ಬಗೆಹರಿಸಲಿದ್ದಾರೆ ಎಂದರು.
ಸಚಿವ ಯೋಗೀಶ್ವರ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಡಬಾರದು. ಸರಿಯಾಗಿ ಹೇಳಬೇಕು. ಈ ಮಧ್ಯೆ ನಾಯಕತ್ವ ಬದಲಾವಣೆ ಬಗ್ಗೆ ಪರ-ವಿರೋಧ ಸಹಿ ಸಂಗ್ರಹ ಸರಿಯಲ್ಲ. ನನ್ನನ್ನು ಈ ವಿಚಾರದಲ್ಲಿ ಯಾರೂ ಸಂಪರ್ಕಿಸಿಲ್ಲ. ಈಗ ಸರ್ಕಾರದಲ್ಲಿ ಬಾಂಬೆ ಟೀಮ್ ಎಂಬುವುದು ಇಲ್ಲ. ಸರ್ಕಾರದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮುಖ್ಯವಾಗಿ ಗೊಂದಲಗಳಿದ್ದರೆ, ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದು ಬೇಡ. ಪಕ್ಷದ ಚೌಕಟ್ಟಿನೊಳಗೆ ಚರ್ಚೆ ಮಾಡುವುದೊಳಿತು ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ವಿರೋಧಿ ಪಡೆ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.. ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಸಿ ತುಪ್ಪ..