ಮೈಸೂರು: ಮೈಸೂರಿನಲ್ಲಿ ಇಎಸ್ಡಿಎಂ ವಲಯದ 230 ಕಂಪನಿಗಳು ಈಗಾಗಲೇ ಸ್ಥಾಪನೆಯಾಗಿದ್ದು, ವರ್ಷಕ್ಕೆ 10,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ ಎಂದು ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಬಿಗ್ ಟೆಕ್ ಶೋ ಕಾರ್ಯಕ್ರಮದಲ್ಲಿ ಅವರು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಹತ್ತು ತಿಂಗಳಲ್ಲಿ ಮೈಸೂರಿನಲ್ಲಿ ಏಳು ಕಂಪನಿಗಳು ಕಾರ್ಯಾರಂಭಿಸಿವೆ. 1,400 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಇನ್ನೂ 7 ಕಂಪನಿಗಳ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ. ಇವು 12,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು ಸದ್ಯದಲ್ಲೇ ಒಪ್ಪಿಗೆ ನೀಡಲಾಗುವುದು ಎಂದರು.
ನವೋದ್ಯಮ ಸ್ಥಾಪನೆ: ಮೈಸೂರಿನಲ್ಲಿ ಮುಂದಿನ ಒಂದು ವರ್ಷದಲ್ಲಿ ವಿದ್ಯಾರ್ಥಿಗಳೇ ನೇತೃತ್ವ ವಹಿಸಲಿರುವ 500 ನವೋದ್ಯಮಗಳನ್ನು ಸ್ಥಾಪಿಸಲಾಗುವುದು. ಇದಲ್ಲದೆ ಸ್ಟಾರ್ಟ್ ಅಪ್ ಹಬ್ ಮುಖಾಂತರ ಈ ಕಂಪನಿಗಳನ್ನು ಬೆಸೆಯಲಾಗುವುದು. ಸೆಮಿಕಂಡಕ್ಟರ್ ಫ್ಯಾಬ್ ವಲಯಕ್ಕೆ ಇಲ್ಲಿ ಈಗಾಗಲೇ 200 ಎಕರೆ ಭೂಮಿ ನೀಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 250 ಎಕರೆ ಭೂಮಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಆರ್ಥಿಕತೆಗೆ ಮೌಲಿಕ ಕೊಡುಗೆ: ರಾಜ್ಯದಲ್ಲಿ ಚಿಪ್ ತಯಾರಿಕೆ ಆಗಬೇಕೆಂಬುದು ಸರ್ಕಾರದ ಸಂಕಲ್ಪ. ಇದಕ್ಕಾಗಿ ಐಸಿಎಂಇ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, 6,000 ಕೋಟಿ ರೂಪಾಯಿಗಳಷ್ಟು ಸಬ್ಸಿಡಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಸಾವಿರಾರು ಸಂಖ್ಯೆಯ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ರಾಜ್ಯದ ಆರ್ಥಿಕತೆಗೆ ಮೌಲಿಕ ಕೊಡುಗೆ ನೀಡಲಿದೆ.
ವಿಸ್ತೃತ ಯೋಜನಾ ವರದಿ: ಮೈಸೂರಿನಲ್ಲಿ ಉದ್ಯಮ ವಲಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲು ಈಗ ಇರುವ 53 ಕಿ. ಮೀ ಸುತ್ತಳತೆಯ ವರ್ತುಲ ರಸ್ತೆ ಸಾಕಾಗುತ್ತಿಲ್ಲ. ಹೀಗಾಗಿ, ನಗರದ ಸುತ್ತ 103 ಕಿಲೋಮೀಟರ್ ವ್ಯಾಪ್ತಿಯ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಯುನೈಟೆಡ್ ಕಿಂಗ್ಡಮ್ ನ ಡೆಪ್ಯುಟಿ ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಬಿ ವಿ ನಾಯ್ಡು, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಟಾಟಾ ಸನ್ಸ್ ಸಮೂಹದ ತನ್ಮಯ್ ಚಕ್ರವರ್ತಿ ಮುಂತಾದವರಿದ್ದರು.
ಇದನ್ನೂ ಓದಿ: ಯುವಿಸಿಇಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ