ಮೈಸೂರು: ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ) ವತಿಯಿಂದ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಸೋಮವಾರ ಮೈಸೂರು ಕೇಂದ್ರ ಶಾಖೆಯಲ್ಲಿ ಚಾಲನೆ ನೀಡಲಾಯಿತು.
ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ, ಬ್ಯಾಂಕಿನ ಗ್ರಾಹಕರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ 20ಕ್ಕೂ ಹೆಚ್ಚು ಸೇವೆಗಳನ್ನು ಅಳವಡಿಸಿರುವ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿದ್ದು, ಪ್ರತಿ ದಿನಕ್ಕೆ 2 ಲಕ್ಷ ರೂ.ವರೆಗೆ ವ್ಯವಹರಿಸಬಹುದು ಎಂದು ತಿಳಿಸಿದರು.
ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬ್ಯಾಂಕಿನ ಷೇರು ಬಂಡವಾಳ 5136.17 ಲಕ್ಷ ರೂ. ಇತ್ತು. ಪ್ರಸ್ತುತ 5351.27 ಲಕ್ಷ ರೂ. ಆಗಿದೆ. ಒಟ್ಟು 215.10 ಲಕ್ಷ ರೂ. ಪ್ರಗತಿ ಸಾಧಿಸಲಾಗಿದೆ. ಬ್ಯಾಂಕಿನ ನಿಧಿಯಲ್ಲಿ ಪ್ರಸ್ತುತ 9307.63 ಲಕ್ಷ ರೂ. ಇದ್ದು, 479.49 ಲಕ್ಷ ರೂ. ಗಳಿಸಲಾಗಿದೆ ಎಂದು ತಿಳಿಸಿದರು. ಬ್ಯಾಂಕಿನ ಠೇವಣಿಯಲ್ಲಿ 48871.05 ಲಕ್ಷ ರೂ. ಇದ್ದು, ಈ ಪೈಕಿ ಕಾಸಾ ಠೇವಣಿ 17342.73 ಮತ್ತು ಎಫ್.ಡಿ. ಬಾಬ್ತು 31528.32 ಇದೆ. ಒಟ್ಟಾರೆ 11153.56 ಪ್ರಗತಿ ಸಾಧಿಸಲಾಗಿದೆ. ರಾಜ್ಯದ ರೈತರಿಗೆ ನೆರವಾಗಲೆಂದು ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲಗಳನ್ನು ನೀಡುತ್ತಿದ್ದು, ಪ್ರಸ್ತುತ 67068.69 ಲಕ್ಷ ರೂ.ನಷ್ಟಿದೆ. ಕೃಷಿಯೇತರ ಸಾಲಗಳು 11615.42 ಲಕ್ಷ ರೂ.ಗಳಷ್ಟಿದೆ ಎಂದು ಮಾಹಿತಿ ನೀಡಿದರು. ಸರ್ಕಾರದಿಂದ ಬರುವ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಪಾರದರ್ಶಕ ಹಾಗೂ ಪ್ರಮಾಣಿಕವಾಗಿ ಶ್ರಮಿಸುತ್ತಿದ್ದು, ಗ್ರಾಹಕರ ಜೊತೆ ನಂಬಿಕಾರ್ಹವಾಗಿ ವ್ಯವಹರಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿದ್ದೇವೆ ಎಂದರು.