ಮೈಸೂರು: ಎರಡು ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಮಕೂರು ಪುಣ್ಯಕ್ಷೇತ್ರಕ್ಕೆ ಬಂದಿದ್ದರು. ಇದು ನಮ್ಮ ಹೆಮ್ಮೆಯ ವಿಚಾರ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಕಾಂಗ್ರೆಸ್, ಜೆಡಿಎಸ್ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್ಸಿಗರಿಗೆ ಕಾಮಾಲೆ ಕಣ್ಣು ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಎಂದು ಟೀಕಿಸಿದರು.
ನೆರೆ ಪರಿಹಾರದ ವಿಚಾರವಾಗಿ ಇನ್ನೆರಡು ದಿನಗಳಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಸಿಹಿ ಸುದ್ದಿ ಕೊಡುತ್ತಾರೆ. ರಾಜ್ಯಕ್ಕೆ ಅಭಿವೃದ್ಧಿ ಪೂರಕವಾಗಿ ಸ್ಪಂದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ವಿಚಾರವಾಗಿ ಮಾತನಾಡಿ, ಅಲ್ಲಿ ಆಚರಣೆಯನ್ನ ನಿಲ್ಲಿಸಿ ಬೇರೆ ಕಡೆ ಆಚರಿಸಲು ಚಿಂತನೆ ಮಾಡುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.