ಮೈಸೂರು: ಎನ್.ಆರ್.ಮೊಹಲ್ಲಾದಲ್ಲಿರುವ ಔಷಧ ಅಂಗಡಿಯೊಂದರಲ್ಲಿ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಮಾರಾಟ ಮಾಡುತ್ತಿದ್ದ ಔಷಧ ಅಂಗಡಿಗಳ ಮೇಲೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾನೂನು ಮಾಪನಾಶಾಸ್ತ್ರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 5,000 ರೂ. ದಂಡ ವಿಧಿಸಿದ್ದಾರೆ.
ಕೋವಿಡ್-19 ಪ್ರಕರಣ ಸಂಬಂಧ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳಿಗೆ ಕೇಂದ್ರ ಸರ್ಕಾರ ದರ ನಿಗದಿ ಪಡಿಸಿದೆ. 2ಪ್ಲೇ ಮಾಸ್ಕ್ಗೆ 8 ರೂ ಹಾಗೂ 3ಪ್ಲೇ ಮಾಸ್ಕ್ಗೆ 10 ರೂ ಹಾಗೂ 200 ಎಂ.ಎಲ್ ಸ್ಯಾನಿಟೈಸರ್ಗೆ 100 ರೂ. ನಿಗದಿ ಮಾಡಿದೆ. ಆದರೂ ಸಹ ಮೆಡಿಕಲ್ ಸ್ಟೋರ್ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಎಮ್. ಮಹಾದೇವಸ್ವಾಮಿ ಹಾಗೂ ಸಿಬ್ಬಂದಿ ನಿತ್ಯಾನಂದ್, ರಾಜೇಂದ್ರ ಅವರು ದಾಳಿ ನಡೆಸಿ 5,000 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಪ್ರಸ್ತುತ ದಂಡ ವಿಧಿಸುವ ಬದಲು ಅಗತ್ಯ ವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವುದಾಗಿ ಮೈಸೂರು ವೃತ್ತದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಣಕ ಕೆ.ಎಂ. ಮಹಾದೇವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಪೊಲೀಸ್ ಆಯುಕ್ತ ಡಾ: ಚಂದ್ರಗುಪ್ತ ಅವರು ಮಾತನಾಡಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಸಾರ್ವಜನಿಕರು ಮನೆಯಿಂದ ಹೊರ ಬಾರದೆ ಕುಟುಂಬಸ್ಥರೊಂದಿಗೆ ಕಾಲ ಕಳೆಯುವಂತೆ ಸೂಚನೆ ನೀಡಿದ್ದಾರೆ.