ಮೈಸೂರು: ವಿವಾಹಿತ ಮಹಿಳೆ ಮತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಿವಾಹಿತ ಮಹಿಳೆಯ ಜೊತೆಗಿರುವ ಫೋಟೋವನ್ನು ಯುವಕ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಇದು ವೈರಲ್ ಆಗುತ್ತಿದ್ದಂತೆ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿತ್ತು. ಮರ್ಯಾದೆಗೆ ಹೆದರಿ ಇಬ್ಬರೂ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿವೆ.
ಮಹಿಳೆ ಆತ್ಮಹತ್ಯೆಗೆ ಯುವಕ ಕಾರಣ ಎಂದು ಯುವತಿಯ ಕುಟುಂಬದವರು ಕೆ.ಆರ್.ನಗರ ಠಾಣೆಯಲ್ಲಿ ಯುಡಿಆರ್ ದೂರು ನೀಡಿದರೆ, ಮಹಿಳೆ ಕುಟುಂಬದವರ ವಿರುದ್ಧ ಪ್ರತಿಯಾಗಿ ಯುವಕನ ಕಡೆಯವರು ನಗರ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿದ್ದಾರೆ. ಡಿವೈಎಸ್‌ಪಿ ಗೋಪಾಲಕೃಷ್ಣ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯುವಕನ ಸಂಬಂಧಿ ಅರೆಬೆತ್ತಲೆಗೊಳಿಸಿ ಥಳಿತ ಆರೋಪ: ಓಡಿ ಹೋಗಿದ್ದ ಜೋಡಿ ಎಸ್ಪಿಗೆ ಮೊರೆ
ವ್ಯಕ್ತಿಯ ಕೊಲೆ: ಸಿಮೆಂಟ್ ಇಟ್ಟಿಗೆಯಿಂದ ವ್ಯಕ್ತಿಯ ತಲೆಯನ್ನು ಜಜ್ಜಿ ಕೊಲೆ ಮಾಡಿರುವ ಘಟನೆ ಹುಣಸೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಗೀಡಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಸುಮಾರು 30 ವರ್ಷದ ವ್ಯಕ್ತಿಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ಯಾರೋ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಹುಣಸೂರಿನ ಅರಸು ಪ್ರತಿಮೆ ವೃತ್ತದ ಬಳಿ ಇರುವ ಸಿಮೆಂಟ್ ಇಟ್ಟಿಗೆ ತಯಾರಿಸುವ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ, ಹುಣಸೂರು ಟೌನ್ ಇನ್ಸ್ಪೆಕ್ಟರ್ ದೇವೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಮೀಪದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದಾರೆ. ಹಂತಕರ ಪತ್ತೆಗೂ ಹುಣಸೂರು ಪೊಲೀಸರು ಜಾಲ ಬೀಸಿದ್ದಾರೆ. ಕೊಲೆ ಆರೋಪಿಗಳ ಬಂಧನದ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ
ಜೋಡಿ ಆತ್ಮಹತ್ಯೆ( ಹುಬ್ಬಳ್ಳಿ): ಮೈಸೂರಿನಲ್ಲಿ ನಡೆದಂತಹ ಘಟನೆ ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಡೆದಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿಯೊಂದು ಹಳೇ ಮೂರಾರ್ಜಿ ನಗರದಲ್ಲಿರುವ ಆಟೋ ಡ್ರೈವರ್ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿತ್ತು. ಆತ್ಮಹತ್ಯೆಗೂ ಮುನ್ನ ಇಬ್ಬರೂ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮೂಲಕ ಮಾತನಾಡಿದ್ದರು.
ಭಾನುವಾರ ಹುಬ್ಬಳ್ಳಿಗೆ ಬಂದ ಈ ಜೋಡಿ ನಗರದಲ್ಲಿ ಆಟೋವೊಂದನ್ನು ಬಾಡಿಗೆ ಪಡೆದಿದ್ದರು. ಬಳಿಕ ಆಟೋದಲ್ಲೇ ಅಕ್ಷಯ ಪಾರ್ಕ್ ಹಾಗೂ ಇನ್ನಿತರ ಕಡೆ ಸುತ್ತಾಡಿ ಆಟೋ ಡ್ರೈವರ್ ಜೊತೆ ಪರಿಚಯ ಬೆಳೆಸಿಕೊಂಡಿದ್ದರು. ಈ ಜೋಡಿ ಆಟೋ ಚಾಲಕನಿಗೆ ಹೇಳಿ ಊಟವನ್ನು ತರಿಸಿಕೊಂಡಿದ್ದರು. ಪರಿಚಯವಾಗಿದ್ದರಿಂದ ಆಟೋ ಚಾಲಕ ಆ ಜೋಡಿಯನ್ನು ಮೂರಾರ್ಜಿ ನಗರದಲ್ಲಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ನಂತರ ನಮ್ಮ ಮನೆಯಲ್ಲಿಯೇ ಊಟ ಮಾಡಿ ಎಂದು ಇವರಿಬ್ಬರಿಗೂ ಹೇಳಿ ತಾನು ಬೇರೆ ಪ್ಯಾಸೆಂಜರ್‌ನ್ನ ಬಿಡಲು ತೆರಳಿದ್ದರು. ಪ್ಯಾಸೆಂಜರ್ ಬಿಟ್ಟು ಮನೆಗೆ ಬಂದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಕಂಡ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಮೃತದೇಹಗಳನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದರು.