ಮೈಸೂರು: ಮಂಗಳೂರಿನ ಗರೋಡಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ಶಂಕಿತ ಶಾರಿಕ್ ಮೈಸೂರಿನಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ.
ಮೈಸೂರಿನ ಲೋಕನಾಯಕನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ ಶಾರಿಕ್, ಬಾಡಿಗೆ ಮನೆ ಪಡೆಯುವಾಗ ನಕಲಿ ದಾಖಲಾತಿ ನೀಡಿದ್ದ. ಹುಬ್ಬಳ್ಳಿ ಯುವಕನ ಆಧಾರ್ ಕಾರ್ಡ್ ನೀಡಿರುವ ಬಗ್ಗೆ ತಿಳಿದುಬಂದಿದೆ.
ಪೊಲೀಸರು ಇಂದು ಶಾರಿಕ್ ವಾಸವಿದ್ದ ಬಾಡಿಗೆ ಮನೆ ಪರಿಶೀಲಿಸಿದ್ದು, ಕೆಲವು ಸ್ಫೋಟಕ ವಸ್ತುಗಳು ಸಿಕ್ಕಿವೆ. ಸರ್ಕ್ಯೂಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ವುಡನ್ ಪೌಡರ್, ಅಲ್ಯೂಮಿನಿಯಂ, ಮಲ್ಟಿ ಮೀಟರ್, ವೈರ್ಸ್,ಮಿಕ್ಸರ್ ಜಾರ್ಸ್, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಫೋಟಕಗಳು ಪತ್ತೆಯಾಗಿವೆ. ಅಲ್ಲದೆ ಬಾಡಿಗೆ ಮನೆಯಲ್ಲಿ ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಂಗಳೂರು ಬಾಂಬ್ ಸ್ಫೋಟ ಪ್ರಕರಣ: ಹುಬ್ಬಳ್ಳಿ ಯುವಕನ ಮನೆಯಲ್ಲಿ ಶೋಧ.. ಆರೋಪ ಅಲ್ಲಗಳೆದ ಪೋಷಕರು
ರಿಂಗ್ ರಸ್ತೆಯ ಪಕ್ಕದಲ್ಲಿಯೇ ಶಾರಿಕ್ ಬಾಡಿಗೆ ರೂಂ ಮಾಡಿದ್ದು, ಶನಿವಾರ ಬೆಳಿಗ್ಗೆ 7.30 ಕ್ಕೆ ಲಗೇಜ್ ಹಿಡಿದು ಮೈಸೂರಿನಿಂದ ಮಂಗಳೂರಿಗೆ ತೆರಳಿದ್ದನಂತೆ. ಸದ್ಯ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಮನೆ ಮಾಲೀಕರನ್ನೂ ಕೂಡ ವಿಚಾರಣೆಗೊಳಪಡಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ಪಡೆದು ಮನೆ ಬಾಡಿಗೆ ನೀಡಿರುವ ಮಾಲೀಕರು ಕಂಗಾಲಾಗಿದ್ದಾರೆ.
(ಓದಿ: ಮಂಗಳೂರು ಬ್ಲಾಸ್ಟ್ ಪ್ರಕರಣ.. ಬೇರೆಡೆ ಹೋಗಿ ಬಾಂಬ್ ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು: ಎಡಿಜಿಪಿ ಅಲೋಕ್ ಕುಮಾರ್)
ಮಂಗಳೂರಿನ ಗರೋಡಿ ಬಳಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟವು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿಯೇ ನಡೆದ ಭಯೋತ್ಪಾದಕ ಕೃತ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆ ಬಳಿಕ ರಾಜ್ಯ ಪೊಲೀಸರು ಹಾಗೂ ಎನ್ಐಎ ತಂಡ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.