ಮೈಸೂರು: ನನ್ನ ಬಳಿ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ. ದಯವಿಟ್ಟು ಬಟ್ಟೆ ಅಂಗಡಿ ತೆರೆಯಲು ಅವಕಾಶ ಕೊಡಿ ಎಂದು ಸಿಎಂ ಬಿಎಸ್ವೈಗೆ ಮೈಸೂರಿನ ವ್ಯಕ್ತಿವೋರ್ವ ಪತ್ರ ಬರೆದಿರುವ ಪ್ರಸಂಗ ಇಲ್ಲಿದೆ.
'ಮುಖ್ಯಮಂತ್ರಿಗಳೇ ನನ್ನ ಮನವಿ ವಿಚಿತ್ರವೆನಿಸಿದರೂ ಸತ್ಯ. ನನ್ನ ಬಳಿ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ ದಯವಿಟ್ಟು ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ನಗರದ ಚಾಮರಾಜಪುರಂನ ನಿವಾಸಿ ಕೊ.ಸು. ನರಸಿಂಹ ಮೂರ್ತಿ ಎಂಬುವರು ಮನವಿ ಮಾಡಿದ್ದಾರೆ.
ಆ ಪತ್ರದಲ್ಲೇನಿದೆ..?
ಬಟ್ಟೆ ಅಂಗಡಿ ತೆರೆಯಿರಿ.!
ಮಾನ್ಯ ಮುಖ್ಯಮಂತ್ರಿಗಳೇ ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸಿರಬೇಕು. ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಲಾಕ್ಡೌನ್ ಮುಂದುವರೆಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿವೆ. ಜನರ ಅಗತ್ಯಗಳ ಬಗ್ಗೆ ಸರಕಾರ / ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು. ಕಳೆದೆರಡು ತಿಂಗಳುಗಳಿಂದ ಎಲ್ಲ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಅಂತ ನೋಡಿದ್ದೀರಾ ?
ಕೇವಲ 2 ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಚಡ್ಡಿ ಹಾಗೂ ಬನಿಯ್ನಗಳು ಹರಿಯುತ್ತಿವೆ. ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೆ ಆಗಿರಬಹುದು. ಯಾರ ಹತ್ರ ಹೇಳೋಣ ನಮ್ ಪ್ರಾಬ್ಲಂ? ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ..! ಹೊಟ್ಟೆ ಬಗ್ಗೆ ಗಮನ ಹರಿಸುವ ಸರ್ಕಾರ ಬಟ್ಟೆಬಗೆಯ ಬಗ್ಗೆಯೂ ಚಿಂತಿಸಬೇಕು. ಎಲ್ಲರೂ ಮಾಡುವುದು ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಅಲ್ಲವೇ ? ಎಂದು ಪ್ರಶ್ನಿಸಿದ್ದಾರೆ.