ಮೈಸೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಪ್ರಿಯತಮೆಯ ಗಂಡನನ್ನು ಕೊಂದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
ತಿ.ನರಸೀಪುರ ತಾಲ್ಲೂಕು ಹೊರಳಹಳ್ಳಿಯ ಸಿದ್ದಪ್ಪಾಜಿಗೆ ಎಂಬುವವ ಜೀವಾವಧಿ ಶಿಕ್ಷೆಗೆ ಒಳಪಟ್ಟರೆ, ಪ್ರಕರಣದ ಮತ್ತೊಬ್ಬ ಆರೋಪಿ ಮಹದೇವಯ್ಯ ಈ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಏನಿದು ಘಟನೆ?
ಸಿದ್ದರಾಜು ಎಂಬುವವರ ಪತ್ನಿಯೊಂದಿಗೆ ಮಹದೇವಯ್ಯ ಎಂಬಾತ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಇದನ್ನು ತಿಳಿದ ಸಿದ್ದರಾಜು ಮಹದೇವಯ್ಯನಿಗೆ ತಮ್ಮ ಮನೆಗೆ ಬರಬೇಡ ಎಂದು ತಾಕೀತು ಮಾಡಿದ್ದ. ಇದರಿಂದ ಕೋಪಗೊಂಡ ಮಹದೇವಯ್ಯ, ತನ್ನ ಸ್ನೇಹಿತ ಸಿದ್ದಪ್ಪಾಜಿಯನ್ನು ಪುಸಲಾಯಿಸಿ ಸಿದ್ದರಾಜುನನ್ನು ಕೊಲೆ ಮಾಡಿಸಿದ್ದ.
ಮಹದೇವಯ್ಯನ ಕುಮ್ಮಕ್ಕಿನಿಂದ ಸಿದ್ದಪ್ಪಾಜಿ ಹೊರಳಹಳ್ಳಿ ಗ್ರಾಮದ ಜಮೀನೊಂದರಲ್ಲಿ ಸಿದ್ದರಾಜುವಿಗೆ ಚೆನ್ನಾಗಿ ಕುಡಿಸಿದ್ದಾನೆ. ನಂತರ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ನಂತರ ಮೃತ ದೇಹವನ್ನು ಕಾಲುವೆಯ ಸಿಮೆಂಟ್ ಪೈಪ್ ಒಳಗೆ ಇನ್ನರು ಸೇರಿ ತುರುಕಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ತಿ.ನರಸೀಪುರ ಠಾಣೆ ಪೊಲೀಸರು ಇವರಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು ಆರೋಪಿ ಸಿದ್ದಪ್ಪಾಜಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹೆಚ್.ಡಿ.ಆನಂದ್ ಕುಮಾರ್ ವಾದ ಮಂಡಿಸಿದ್ದರು.