ಮೈಸೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕನ ಮೇಲೆ ಆನೆಗಳ ಹಿಂಡು ದಾಳಿ ಮಾಡಿ, ಆತನನ್ನು ತುಳಿದು ಸಾಯಿಸಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹುಲ್ಲಹಳ್ಳಿಯ ಹೋಬಳಿಯ ಮೆಲ್ಲಹಳ್ಳಿ ಗ್ರಾಮದ ಚನ್ನಪ್ಪ(40) ಆನೆ ದಾಳಿಗೆ ಬಲಿಯಾದ ರೈತ. ಚನ್ನಪ್ಪ ಹೊಲದ ಕೆಲಸದಲ್ಲಿ ನಿರತರಾಗಿದ್ದ ವೇಳೆ ಆನೆಗಳ ಹಿಂಡು ಬಂದಿದೆ.
ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿ ಹೋಗಿ ಆನೆಗಳ ದಾಳಿಯಿಂದ ಬಚಾವ್ ಆಗಿದ್ದಾರೆ. ಆದರೆ, ಓಡುವಾಗ ಚನ್ನಪ್ಪ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಇವರನ್ನು ಆನೆಗಳ ಹಿಂಡು ತುಳಿದು ಸಾಯಿಸಿದೆ. ವಿಷಯ ತಿಳಿದ ಕೂಡಲೇ ಗ್ರಾಮಸ್ಥರು ಬಂದು ಆನೆಗಳನ್ನು ಓಡಿಸಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಿಂದ ಮೆಲ್ಲಹಳ್ಳಿ ಜಮೀನಿನ ಕಡೆ ಆಗಾಗ ಆನೆಗಳು ದಾಂಗುಡಿ ಇಡುತ್ತವೆ. ಹೀಗಾಗಿ ಆನೆಗಳನ್ನು ಕಾಡಿಗೆ ಅಟ್ಟಲು ಸಿಬ್ಬಂದಿಯನ್ನು ನಿಯೋಜಿಸುವಂತೆ, ಅರಣ್ಯಾಧಿಕಾರಿಗಳಿಗೆ ಇಲ್ಲಿನ ಜನ ಮನವಿ ಮಾಡಿದ್ದಾರೆ.