ಮೈಸೂರು : ಮಗನೇ ತಂದೆಯನ್ನ ಕೊಲೆ ಮಾಡಿದ್ದ ಪ್ರಕರಣವೀಗ ತಿರುವು ಪಡೆದಿದೆ. ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧದ ಕಾರಣಕ್ಕಾಗಿ ಮಗನೇ ತಂದೆ ಹಾಗೂ ಆತನ ಜತೆಗಿದ್ದ ಮಹಿಳೆಯನ್ನ ಬರ್ಬರ ಕೊಲೆ ಮಾಡಿರೋದು ಬಯಲಾಗಿದೆ.
ಕೊಲೆಯಾದ ಶಿವಪ್ರಕಾಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು ಮಗಳು ಹಾಗೂ ಮತ್ತೊಬ್ಬ ಮಗ ಸಾಗರ್. ಸಾಕಷ್ಟು ಹಣವಂತನಾಗಿದ್ದ ಶಿವಪ್ರಕಾಶ್ ಕಳೆದ 20 ವರ್ಷಗಳಿಂದ ಲತಾ ಎಂಬ ಮಹಿಳೆ ಜತೆ ಸಂಬಂಧ ಬೆಳೆಸಿದ್ದರು. ಲತಾ ಮೂಲತಃ ಹೆಚ್‌ಡಿ ಕೋಟೆ ತಾಲೂಕು ಹೊಸಳ್ಳಿ ಗ್ರಾಮದವಳು. ಆಕೆ ಗಂಡ ನಾಗರಾಜು ಈಗ ಕೊಲೆ ಆಗಿರುವ ಶಿವಪ್ರಕಾಶ್ ಬಳಿ ಕಾರು ಚಾಲಕನಾಗಿದ್ದ. ಶಿವಪ್ರಕಾಶ್ ಡ್ರೈವರಾಗಿದ್ದ ನಾಗರಾಜು ಮನೆಗೆ ಬಂದು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದ.
ಆದರೆ, 20 ವರ್ಷದ ಹಿಂದೆಯೇ ಲತಾಳ ಗಂಡ ನಾಗರಾಜು ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಇದಾದ ನಂತರ ಲತಾ ಹಾಗೂ ಶಿವಪ್ರಕಾಶ್ ಒಟ್ಟಿಗೆ ದಿನ ಕಳೆಯಲು ಆರಂಭಿಸಿದ್ದಾರೆ. ಹೆಚ್‌ಡಿಕೋಟೆಯ ಹೊಸಳ್ಳಿಯಲ್ಲಿ ಪ್ರೇಯಸಿ ಕುಟುಂಬವನ್ನು ಮೈಸೂರಿಗೆ ತಂದು ಇರಿಸಿದ್ದಾನೆ.
ಅಷ್ಟು ವರ್ಷಗಳಿಂದ ಲತಾ ಹಾಗೂ ಆಕೆಯ ಮಕ್ಕಳನ್ನು ಪೋಷಣೆ ಮಾಡಿಕೊಂಡು ಬಂದಿದ್ದ ಶಿವಪ್ರಕಾಶ್, ಆಕೆಗಾಗಿ ಶ್ರೀನಗರದಲ್ಲಿ 30×40 ಮನೆ ಕಟ್ಟಿಸಿಕೊಟ್ಟಿದ್ದಾನೆ. ಅಷ್ಟು ಮಾತ್ರವಲ್ಲದೆ ಆಕೆಯ ಇಬ್ಬರು ಹೆಣ್ಣು ಮಕ್ಕಳಿಗೂ ತಾನೇ ಮುಂದೆ ನಿಂತು ಮದುವೆ ಮಾಡಿದ್ದ.
ತನ್ನ ತಂದೆ ಬೇರೊಂದು ಕುಟುಂಬಕ್ಕೆ ಇಷ್ಟೆಲ್ಲ ಖರ್ಚು ಮಾಡುತ್ತಿರುವುದು ಸಹಜವಾಗಿಯೇ ಮಗ ಸಾಗರ್ಗೆ ಕೋಪ ತರಿಸಿತ್ತು. ಈ ವಿಚಾರವಾಗಿ ಆತ ಪದೇಪದೆ ಜಗಳ ತೆಗೆದಿದ್ದ. ಸಾಕಷ್ಟು ಬಾರಿ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದ. ಅಷ್ಟೇ ಅಲ್ಲ, ಶಾಸಕರ ಸಮ್ಮುಖದಲ್ಲಿ ಹಲವು ಬಾರಿ ತಂದೆ-ಮಗನ ಜಗಳ ರಾಜೀ ಮಾಡಲಾಗಿತ್ತು.
ಕಳೆದ 20 ವರ್ಷಗಳಿಂದಲೂ ಶಿವಪ್ರಕಾಶ್ ಎರಡೂ ಮನೆಗಳಲ್ಲಿ ವಾಸ ಮಾಡಿಕೊಂಡು ಬಂದಿದ್ದಾನೆ. ಬೆಳಗ್ಗೆಯಿಂದ ಸಂಜೆವರೆಗೆ ಪ್ರೇಯಸಿ ಲತಾ ಮನೆಯಲ್ಲಿ ಕಾಲ ಕಳೆದರೆ, ರಾತ್ರಿ ಮಲಗುವ ವೇಳೆಗೆ ತನ್ನ ಮನೆಗೆ ಬರುತ್ತಿದ್ದ. ಗುರುವಾರ ಕೂಡ ಎಂದಿನಂತೆ ಶಿವಪ್ರಕಾಶ್ ಲತಾ ಮನೆಗೆ ಬಂದಿದ್ದ. ರಾತ್ರಿ 9 ಗಂಟೆಗೆ ಊಟ ಮುಗಿಸಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆತನ ಮಗ ಸಾಗರ್ ಎಂಟ್ರಿಯಾಗಿದ್ದಾನೆ.
ಲತಾ ಮನೆಯೊಳಗಿದ್ದ ತಂದೆಯನ್ನು ಹೊರಗೆ ಕರೆಸಿದ ಮಗ ಅಲ್ಲೇ ಗಲಾಟೆ ಶುರು ಮಾಡಿದ್ದ. ಹೊರಗೆ ತಂದೆ ಮಕ್ಕಳ ಜಗಳ ಬಿಡಿಸಲು ಲತಾ ಹಾಗೂ ಆಕೆಯ ಮಗ ನಾಗಾರ್ಜುನ ಬಂದಿದ್ದರು. ಆಗ ಆರೋಪಿ ಸಾಗರ್ ತಾನು ತಂದಿದ್ದ ಮಚ್ಚಿನಿಂದ ತಂದೆಯ ಕತ್ತಿಗೆ ಹೊಡೆದು ಕೊಂದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಪ್ರೇಯಸಿ ಲತಾ ತಲೆಗೂ ಮಚ್ಚಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಪ್ರಕಾಶ್ ಮಗ ಸಾಗರ್ ಜೂಜಾಟದ ಚಟಕ್ಕೆ ಬಲಿಯಾಗಿದ್ದನಂತೆ. ಐಪಿಲ್ ಬೆಟ್ಟಿಂಗ್ ದಂಧೆಯಲ್ಲಿ ಸುಮಾರು ₹70 ಲಕ್ಷ ಹಣ ಸಾಲ ಮಾಡಿಕೊಂಡಿದ್ದನಂತೆ. ಆದರೆ, ತಂದೆ ಶಿವಪ್ರಕಾಶ್ ಮಗನ ಈ ಸಾಲವನ್ನೂ ಇತ್ತೀಚೆಗೆ ತೀರಿಸಿದ್ದ. ಸಾಲ ತೀರಿಸಿದ ನಂತರವೂ ಮಗ ಹಣಕ್ಕಾಗಿ ಪದೇಪದೆ ತಂದೆಯನ್ನು ಪೀಡಿಸುತ್ತಿದ್ದನಂತೆ.
ಈ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ನನಗೆ ಸೇರಬೇಕಾದ ಹಣವನ್ನ ನೀನು ಬೇರೆಯವರಿಗೆ ಸುರಿಯುತ್ತಿದ್ದೀಯಾ ಎಂದು ದೊಡ್ಡ ಗಲಾಟೆ ಮಾಡುತ್ತಿದ್ದನಂತೆ. ರಾತ್ರಿ ಇದೇ ಗಲಾಟೆ ವಿಕೋಪಕ್ಕೆ ತಿರುಗಿ ತಂದೆ ಹಾಗೂ ಆತನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಗರದ ಹೊರ ವಲಯದ ಶ್ರೀನಗರದಲ್ಲಿ ನಿನ್ನೆ ರಾತ್ರಿ ಆರೋಪಿ ಸಾಗರ್ ತನ್ನ ತಂದೆ ಶಿವಪ್ರಕಾಶ್ (56) ಹಾಗೂ ಆತನ ಜೊತೆ ಅನೈತಿಕ ಸಂಬಂಧವಿದ್ದ ಲತಾ (48) ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಿದ್ದ.
ಈ ಸಂಬಂಧ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಮೃತದೇಹಗಳನ್ನು ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಪರಾರಿಯಾಗಿರುವ ಸಾಗರ್ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ: ನಿದ್ದೆಯಲ್ಲಿದ್ದಾಗ ಕುಸಿದ ಮನೆ: ಐವರು ಸಾವು, ಆರು ಮಂದಿ ಸ್ಥಿತಿ ಗಂಭೀರ