ಮೈಸೂರು: ಚಾಮುಂಡಿ ಬೆಟ್ಟದಲ್ಲಿ 'ಸಪ್ತಪದಿ ಸರಳ ಸಾಮೂಹಿಕ ವಿವಾಹ' ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲಾ ಇಲಾಖೆಗಳು ಸಹಕಾರ ನೀಡಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ನೋಡಲ್ ಅಧಿಕಾರಿ ಬಿ. ಮಂಜುನಾಥ್ ಅವರು ಮನವಿ ಮಾಡಿದರು.
ಸಪ್ತಪದಿ ಸರಳ ಸಾಮೂಹಿಕ ವಿವಾಹದ ಹಿನ್ನಲೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿ, ಒಂದು ಮದುವೆ ಮಾಡುವುದು ತುಂಬಾ ಕಷ್ಟ. ಜಿಲ್ಲಾಡಳಿತದ ವತಿಯಿಂದ ನೂರಾರು ಮದುವೆಯನ್ನು ಮಾಡಿಸುವಂತಹ ಪುಣ್ಯದ ಕೆಲಸ ನಮಗೆ ದೂರಕಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು. ಏಪ್ರಿಲ್ 26 ರಂದು ಶ್ರೀ ಚಾಮುಂಡೇಶ್ವರಿ ದೇವಾಲಯದ ಬಳಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 27ರ ವರೆಗೆ ಅವಕಾಶವಿದೆ ಎಂದು ತಿಳಿಸಿದರು.
ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ಕೊಳ್ಳಲು 5,000 ರೂಪಾಯಿಗಳನ್ನು ನೀಡಲಾಗುತ್ತದೆ. ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಮುಂತಾದ ಪರಿಕರಕ್ಕಾಗಿ 10,000 ರೂಗಳನ್ನು ಮತ್ತು 8 ಗ್ರಾಂ ಚಿನ್ನದ ತಾಳಿ, ಚಿನ್ನದ ಗುಂಡನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ವಿವಾಹವನ್ನು ಬಯಸುವವರು ಸರ್ಕಾರದ ನಿಯಮದಂತೆ ವರನಿಗೆ 21 ವರ್ಷ, ವಧುವಿಗೆ 18 ವರ್ಷಗಳು ಮೀರಿದ್ದು, ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕಿದೆ. ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ಪಡೆದು ಅಲ್ಲೆ ಸಲ್ಲಿಸಬಹುದಾಗಿದೆ. ಅರ್ಜಿಯ ಜೊತೆಯಲ್ಲಿ ಎಸ್ಎಸ್ಎಲ್ಸಿ ಅಂಕಪಟ್ಟಿ, ಶಾಲಾ ದಾಖಲಾತಿ, ಪಾನ್‍ಕಾರ್ಡ್, ಪಡಿತರ ಚೀಟಿ, ಮತದಾನ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿ ನೋಂದಾಣಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ವಧುವರರು ಅಂತರ್ಜಾತಿಯವರಾಗಿದ್ದರೆ ಜಾತದೃಢೀಕರಣ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾಗಿದೆ ಎಂದರು.
ದಾಖಲೆಗಳು ಸುಳ್ಳೆಂದು ತಿಳಿದಲ್ಲಿ ಅಂತವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು. ವರ ವಧು ಕಡೆಯಿಂದ ಯಾವುದೇ ವಿಧವಾದ ವರದಕ್ಷಣೆಯನ್ನು ಪಡೆಯುವಂತಿಲ್ಲ. ವಧುವರರಿಗೆ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶವಿರುತ್ತದೆ. ವಧುವರರ ತಂದೆ ತಾಯಿಯವರು ವಿವಾಹಕ್ಕೆ ಅನುಮತಿ ನೀಡಿ ವಿವಾಹದಲ್ಲಿ ಪಾಲ್ಗೊಂಡರೆ ಮಾತ್ರ ವಿವಾಹವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.