ಮೈಸೂರು : ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಅಕ್ಟೋಬರ್ 13ರಂದು ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾ ಆಚರಣೆ ಮಾಡಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಮಹಿಷಾ ದಸರಾ ಆಚರಣೆ ಸಮಿತಿಯ ಸದಸ್ಯ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ದಸರಾವನ್ನು ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿ ಆಚರಿಸಲಾಗುತ್ತದೆ. ಈ ವೇಳೆ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾಕ್ಕೆ ಚಾಲನೆ ನೀಡಲಾಗುವುದು. ಚಾಮುಂಡಿ ಬೆಟ್ಟದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ವೇದಿಕೆ ಕಾರ್ಯಕ್ರಮವನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಯೋಜನೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಬೇರೆ ಬೇರೆ ಕಡೆಗಳಿಂದ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಬಾರಿ ಮಹಿಷಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪೊಲೀಸ್ ಇಲಾಖೆಯೂ ಸಹಕಾರ ಕೊಡುವ ನಿರೀಕ್ಷೆ ಇದೆ. ನಾಡಹಬ್ಬ ದಸರಾ ಆಚರಣೆಗೂ ಎರಡು ದಿನ ಮುನ್ನ ಮಹಿಷಾ ದಸರಾ ಆಚರಿಸಲಾಗುವುದು. ಮಹಿಷಾ ದಸರಾಗೂ ನಾಡಹಬ್ಬ ದಸರಾಗೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ವೇಳೆ ತಿಳಿಸಿದರು.
ಮಹಿಷಾ ದಸರಾದ ಕುರಿತು ರಾಜ್ಯ ಮಟ್ಟದ ವಿಚಾರಗೋಷ್ಠಿ : ಅಕ್ಟೋಬರ್ 10ರಂದು ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕರ ಸಂಘದಿಂದ ಮಾನಸ ಗಂಗೋತ್ರಿಯ ಲಲಿತಾ ಕಲಾ ಕಾಲೇಜಿನಲ್ಲಿ "ಮಹಿಷಾ ಮಂಡಲದ ಆದಿದೊರೆ ಮಹಿಷಾಸುರ" ಎಂಬ ಚಾರಿತ್ರಿಕ ನೋಟ ಎಂಬ ವಿಚಾರಗೋಷ್ಠಿ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 3 ವಿಚಾರಗೋಷ್ಠಿಗಳು ನಡೆಯಲಿದೆ. ಇದರಲ್ಲಿ ರಾಜ್ಯದ ವಿವಿಧ ಕಡೆಯಿಂದ ಆಗಮಿಸುವ ಸುಮಾರು 28 ಮಂದಿ ಪ್ರಗತಿಪರ ಚಿಂತಕರು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹಗೆ ಇತಿಹಾಸ ಗೊತ್ತಿಲ್ಲ : ರಾಜ್ಯ ಸರ್ಕಾರಕ್ಕೆ ದೇವಾಲಯಗಳ ಅಭಿವೃದ್ಧಿ ಕಾರ್ಯಗಳಿಗಿಂತ ಮಹಿಷಾ ದಸರಾವೇ ಮುಖ್ಯವಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಪುರುಷೋತ್ತಮ್, ನಾವೇನು ದೇವಾಲಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಪ್ರತಾಪ್ ಸಿಂಹಗೆ ಇಲ್ಲಿನ ಇತಿಹಾಸ ಗೊತ್ತಿಲ್ಲ. ಇತಿಹಾಸ ಸರಿಯಾಗಿ ಗೊತ್ತಿಲ್ಲದಿದ್ದರೆ ಇದ್ದರೆ ಬಾಯಿಮುಚ್ಚಿಕೊಂಡು ಸುಮ್ಮನೆ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಷಾ ದಸರಾ ಆಚರಣೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ದೇವಾಲಯಗಳ ಅಭಿವೃದ್ಧಿಗಿಂತ ಸರ್ಕಾರಕ್ಕೆ ಮಹಿಷ ದಸರಾವೇ ಮುಖ್ಯವಾಗಿದೆ : ಸಂಸದ ಪ್ರತಾಪ್ ಸಿಂಹ