ಮೈಸೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಮಹಾರಾಜ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಬಲಿಷ್ಠ ಮೈಸೂರು ವಾರಿಯರ್ಸ್ ವಿರುದ್ಧ 13 ರನ್ ಅಂತರದ ಜಯ ಸಾಧಿಸಿದೆ. 174 ರನ್ ಜಯದ ಗುರಿ ಬೆನ್ನತ್ತಿದ ವಾರಿಯರ್ಸ್, 20 ಓವರ್‌ಗಳಲ್ಲಿ 8 ವಿಕೆಟ್ಗೆ 161 ರನ್ ಗಳಿಸಿ ಸೋಲುಂಡಿತು.
ಪವನ್ ದೇಶಪಾಂಡೆ (64) ಹಾಗೂ ಲೋಚನ್ ಅಯ್ಯಪ್ಪ (27*) ಹೊರತುಪಡಿಸಿದರೆ ಉಳಿದ ಆಟಗಾರರು ಸ್ಟ್ರೈಕರ್ಸ್ ದಾಳಿ ಎದುರಿಸುವಲ್ಲಿ ವಿಫಲರಾದರು. ಉತ್ತಮ್ ಅಯ್ಯಪ್ಪ, ಕೃಷ್ಣಪ್ಪ ಗೌತಮ್ ಹಾಗೂ ಎಂ.ಬಿ ದರ್ಶನ್ ತಲಾ 2 ವಿಕೆಟ್ ಕಬಳಿಸಿ ಶಿವಮೊಗ್ಗ ಜಯವನ್ನು ಸುಲಭವಾಗಿಸಿದರು. ಸತತ ಎರಡನೇ ಪಂದ್ಯದಲ್ಲೂ ಮೈಸೂರು ವಾರಿಯರ್ಸ್ ನಾಯಕ ರನ್ ಗಳಿಸಲು ವಿಫಲವಾಗಿದ್ದು, ತಂಡಕ್ಕೆ ತಲೆನೋವು ತಂದಿದೆ. ಇಂದೂ ಕೂಡ ಕರುಣ್ ನಾಯರ್ ಶೂನ್ಯ ಗಳಿಕೆಯೊಂದಿಗೆ ಪೆವಿಲಿಯನ್ ಸೇರಿದರು.
ಸ್ಟ್ರೈಕರ್ಸ್‌ಗೆ ಶರತ್ ಬಲ: ಟಾಸ್ ಗೆದ್ದ ಮೈಸೂರು ಎದುರಾಳಿ ಶಿವಮೊಗ್ಗ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ರೋಹನ್ ಕದಮ್ (18) ಮತ್ತು ಬಿ.ಆರ್. ಶರತ್ 56 ರನ್ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದ್ದರು. ಆದರೆ ಶುಭಾಂಗ್ ಹೆಗ್ಡೆ ಅವರ ಸ್ಪಿನ್ ಮೋಡಿಗೆ ಸಿಕ್ಕ ಕದಮ್ ವಿಕೆಟ್ ಕಳೆದುಕೊಳ್ಳುವ ಮೂಲಕ ಶಿವಮೊಗ್ಗದ ರನ್ ಗಳಿಕೆಗೆ ಕಡಿವಾಣ ಬಿದ್ದಿತು. ಬಳಿಕ ವಿನಯ್ ಸಾಗರ್ 1 ರನ್ ಗಳಿಸಿ ಹೆಗ್ಡೆ ಬೌಲಿಂಗ್‌ನಲ್ಲಿ ಮನೀಶ್ ರೆಡ್ಡಿಗೆ ಕ್ಯಾಚಿತ್ತರು.
ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಬಿ.ಆರ್. ಶರತ್ ಅರ್ಧಶತಕ ಸಿಡಿಸಿ ತಂಡದ ರನ್ ಗಳಿಕೆಗೆ ಮರುಜೀವ ನೀಡಿದರು. 35 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿದ ಶರತ್, ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲಿ ಮನೀಶ್ ರೆಡ್ಡಿಗೆ ಕ್ಯಾಚಿತ್ತಾಗ ಉತ್ತಮ ಇನ್ನಿಂಗ್ಸ್‌ವೊಂದು ಕೊನೆಗೊಂಡಿತು. ತದನಂತರ ಕೆ. ಸಿದ್ಧಾರ್ಥ್ (36), ಸ್ಟಾಲಿನ್ ಹೂವರ್ (16) ಹಾಗೂ ನಾಯಕ ಕೆ. ಗೌತಮ್ (6) ಅವರ ವಿಕೆಟ್ ಕಬಳಿಸುವ ಮೂಲಕ ವಿದ್ಯಾಧರ ಪಾಟೀಲ್ ಶಿವಮೊಗ್ಗದ ಮಧ್ಯಮ ಕ್ರಮಾಂಕದ ಆಟಗಾರರ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಒಂದೆಡೆ ನಿರಂತರ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಶಿವಮೊಗ್ಗದ ಬ್ಯಾಟರ್ಗಳು ರನ್ ಸರಾಸರಿ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಪರಿಣಾಮ ಕೆ. ಗೌತಮ್ ಪಡೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಮೈಸೂರು ಪರ ವಿದ್ಯಾಧರ ಪಾಟೀಲ್ 39ಕ್ಕೆ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ಆದಿತ್ಯ ಗೋಯಲ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಭೂಮಿ ಮೇಲೆ 4 ಸಾವಿರ ಹುಲಿಗಳಿವೆ, ಭಾರತ ಕ್ರಿಕೆಟ್ನಲ್ಲಿ ದ್ರಾವಿಡ್ ಏಕೈಕ ಹುಲಿ ಎಂದ ರಾಸ್ ಟೇಲರ್