ಮೈಸೂರು: ಯುವ ದಸರಾ ವೇದಿಕೆಯಲ್ಲಿ ಲವ್ ಪ್ರಪೋಸ್ ಮಾಡಿದ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಯುವದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ ಪ್ರಕರಣ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಯುವದಸರಾ ಸಮಿತಿ ಉಸ್ತುವಾರಿ ವಹಿಸಿದ್ದ ರಿಷ್ಯಂತ್ ಅವರಿಗೆ ನೋಟಿಸ್ ನೀಡಿ ವಿವರಣೆ ಪಡೆಯುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಜನರನ್ನು ಆಕರ್ಷಿಸುವ ದೃಷ್ಟಿಯಿಂದ ಈ ರೀತಿ ಚಂದನ್ ಶೆಟ್ಟಿ ನಡೆದುಕೊಂಡಿದ್ದಾರೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ರಿಷ್ಯಂತ್ ವಿವರಣೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸ್.ಪಿ ಸರ್ಕಾರಿ ವೇದಿಕೆಯಲ್ಲಿ ಈ ರೀತಿ ವರ್ತನೆಯನ್ನು ಇನ್ನೂ ಮುಂದೆ ತೋರಬಾರದು, ತೋರಿದರೆ ಸರ್ಕಾರಿ ಕಾರ್ಯಕ್ರಮಕ್ಕೆ ನಿಮಗೆ ನಿಷೇಧ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಈ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.