ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಂಧಿತ ಆರೋಪಿ ಮೈಸೂರಿನ ಮನೋರಂಜನ್ ಮನೆಗೆ ಭೇಟಿ ನೀಡಿ ಕಳೆದೆರಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಇಂದೂ ಕೂಡ ಆರೋಪಿ ಮನೋರಂಜನ್ ಸ್ನೇಹಿತರು ಹಾಗೂ ಕಟಿಂಗ್ ಶಾಪ್ ಮಾಲೀಕರನ್ನು ಪ್ರಶ್ನಿಸಿದ್ದಾರೆ.
ಮನೋರಂಜನ್ ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಮನೆಯಲ್ಲಿ ಕಳೆದ ಎರಡು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಆರೋಪಿಯ ಪೋಷಕರಿಂದ ಮಾಹಿತಿ ಪಡೆದ ಪೊಲೀಸರ ತಂಡ ಬುಧವಾರ ಸಂಜೆ ಮತ್ತೆ ಮನೆಗೆ ಭೇಟಿ ನೀಡಿತು.
ಇಂದು ಮೈಸೂರಿನ ಮನೋರಂಜನ್ ಸ್ನೇಹಿತರು, ಹೇರ್ ಕಟಿಂಗ್ ಮಾಡಿಸಿಕೊಳ್ಳುತ್ತಿದ್ದ ಶಾಪ್ ಮಾಲೀಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಾಲ್ಕನೇ ದಿನವೂ ದೆಹಲಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದರ ಜೊತೆಗೆ ಮನೋರಂಜನ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸಾಗರ್ ಶರ್ಮಾ ಮೈಸೂರಿನ ಯಾವ್ಯಾವ ಸ್ಥಳಗಳಿಗೆ ಭೇಟಿ ನೀಡಿದ್ದರು. ಯಾರನ್ನೆಲ್ಲ ಭೇಟಿ ಆಗಿದ್ದರು, ಅವರ ಚಟುವಟಿಕೆಗಳೇನು, ಯಾವುದೇ ಕೆಲಸವನ್ನೂ ಮಾಡದ ಮನೋರಂಜನ್ಗೆ ಎಲ್ಲಿಂದ ಹಣ ಬರುತ್ತಿತ್ತು ಎಂಬುದರ ವಿಷಯ ಜಾಲಾಡುತ್ತಿದ್ದಾರೆ.
ಮನೋರಂಜನ್ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣಗಳ ಕುರಿತು ತನಿಖೆ ನಡೆಸುತ್ತಿದ್ದು, ತಂದೆಯ ಬ್ಯಾಂಕ್ ಖಾತೆ ವಿವರ ಪಡೆದಿದ್ದಾರೆ. ಸದ್ಯ ಮೈಸೂರಿನಲ್ಲೇ ತನಿಖಾ ತಂಡ ವಾಸ್ತವ್ಯ ಹೂಡಿದೆ. ಇದಕ್ಕೂ ಮೊದಲು ದೆಹಲಿ ಪೊಲೀಸರು ಮನೋರಂಜನ್ ಮನೆಗೆ ಭೇಟಿ ನೀಡಿ ಪೋಷಕರನ್ನು ವಿಚಾರಣೆ ನಡೆಸಿದ್ದರು. ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಲೋಕಸಭೆ ಅಧಿವೇಶನ ವೇಳೆ ಸಂಸತ್ಗೆ ನುಗ್ಗಿದ ದುಷ್ಕರ್ಮಿಗಳು ಸ್ಮೋಕ್ ಬಾಂಬ್ ಸಿಡಿಸಿದ್ದರು. ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮೈಸೂರಿನ ಮನೋರಂಜನ್ ಮನೆಯಲ್ಲಿ ದೆಹಲಿ ಪೊಲೀಸರಿಂದ ಶೋಧ