ಮೈಸೂರು: ಕೊರೊನಾ ವೈರಸ್ ಸೋಂಕಿನಿಂದ ಇಡೀ ದೇಶವೇ ಲಾಕ್ಡೌನ್ ಆಗಿದ್ದು ಇದರ ನೇರ ಪರಿಣಾಮ ಅನಾಥರು, ನಿರ್ಗತಿಕರು, ಭಿಕ್ಷುಕರ ಮೇಲೆ ಉಂಟಾಗಿದೆ. ಇವರ ನಿರ್ವಹಣೆಗಾಗಿ ಮೈಸೂರು ಜಿಲ್ಲಾಡಳಿತ ಮಾರ್ಚ್ 22ರಿಂದ ಅನಾಥರು, ನಿರಾಶ್ರಿತರು ಹಾಗೂ ಭಿಕ್ಷುಕರಿಗಾಗಿ 19 ಸಾಂತ್ವನ ಕೇಂದ್ರಗಳನ್ನು ತೆರೆದಿದೆ.
ಈ ಕೇಂದ್ರಗಳಲ್ಲಿ ಪ್ರತಿದಿನ 8 ಸಾವಿರ ಮಂದಿಗೆ ಬೆಳಗ್ಗೆಯು ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಊಟ ನೀಡಲಾಗುತ್ತಿದೆ. ಇದರ ಜೊತೆಗೆ ಕೆಲವು ದಾನಿಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ ಬಂದ ಊಟದ ಜೊತೆಗೆ ಮಹಾನಗರ ಪಾಲಿಕೆಯು ಪ್ರತಿದಿನ ಮೂರು ಹೊತ್ತು ಊಟವನ್ನು ಬಡವರಿಗೆ, ಅಶಕ್ತರಿಗೆ, ನಿರಾಶ್ರಿತರಿಗೆ ನೀಡುತ್ತಾ ಬಂದಿದೆ.
ದೇವಸ್ಥಾನದ ದಾಸೋಹ ಭವನಗಳಿಂದಲೂ ಸಹ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳು ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಅನಾಥಾಲಯಗಳಿಗೆ ಆಹಾರ ಒದಗಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ತಸ್ನೀಂ ತಿಳಿಸಿದ್ದಾರೆ.
ಈ ಜಿಲ್ಲಾಡಳಿತ, ಪಾಲಿಕೆ ಜೊತೆಗೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಲಾಕ್ಡೌನ್ ಸಂಕಷ್ಟದ ಪರಿಹಾರಕ್ಕೆ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.