ಮೈಸೂರು : ವಿಧಾನ ಪರಿಷತ್ನಲ್ಲಿ ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಭಾಪತಿಗಳ ಕುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಎಂಎಲ್ಸಿ ಆದವರೂ ಸಹ ಆ ಕುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿದ್ದರು.
ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಬುದ್ಧಿ ಹೇಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಸದಸ್ಯರೂ ಉಪ ಸಭಾಪತಿಗಳಾದ ಧರ್ಮೇಗೌಡರನ್ನು ಎಳೆದಾಡಿ ಗೂಂಡಾಗಿರಿ ಮಾಡಿದ ಹಾಗೆ ಬಲವಂತವಾಗಿ ಕುರ್ಚಿಯಿಂದ ಎಳೆದಾಡಿದ್ದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಗೂಂಡಾಗಿರಿ ಮಾಡಿದವರನ್ನು ಕಾಂಗ್ರೆಸ್ ಅಮಾನತು ಮಾಡಲಿ.
ಕಾಂಗ್ರೆಸ್ನವರಿಗೆ ಮರ್ಯಾದೆ ಉಳಿಸಿಕೊಳ್ಳಬೇಕೆಂದಿದ್ರೆ ಹೀಗೆ ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಬೇಕು. ಚಿಂತಕರ, ಬುದ್ಧಿವಂತರ ಚಾವಡಿ ಎಂದೇ ಹೆಸರಾಗಿದ್ದ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಇಂತಹ ಒಂದು ಕೀಳುಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಅಂಚೆ ಇಲಾಖೆಯ ಕರ್ನಾಟಕ ವಲಯದ ಇಬ್ಬರಿಗೆ 'ಮೇಘದೂತ್' ಪ್ರಶಸ್ತಿ
ಸಭಾಪತಿಗಳ ಮೇಲೆ ಆರೋಪ ಬಂದ ಮೇಲೆ ಅವರು ಆ ಕುರ್ಚಿಯಲ್ಲಿ ಕೂರುವಂತಿಲ್ಲ. ಅವಿಶ್ವಾಸ ನಿರ್ಣಯ ಗೊತ್ತುವಳಿಯಾದ ಮೇಲೆ ಸಭಾಪತಿಗಳಾದವರು ಕುರ್ಚಿ ಬಿಟ್ಟು ಕೊಡಬೇಕು. 14 ದಿನದ ಅವಧಿಯಲ್ಲಿ ಅವಕಾಶ ಕಲ್ಪಿಸಿ ಸರಿಯಾದ ರೀತಿ ನಡೆದುಕೊಳ್ಳಬೇಕು. ಆದರೆ, ಅದಕ್ಕೆ ಅವಕಾಶ ಕೊಡದ ಸಭಾಪತಿಗಳ ನಡೆ ಸರಿಯಲ್ಲ ಎಂದು ಖಂಡಿಸಿದರು.
ಇದು ನೂರಕ್ಕೆ ನೂರು ಕಾಂಗ್ರೆಸ್ನವರ ಪೂರ್ವನಿಯೋಜಿತ ಸಂಚು. ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಗೂಂಡಾಗಿರಿ ಮಾಡುವ ಹಾಗೂ ದಾಂಧಲೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.