ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಪಘಾತಗೊಂಡಿದ್ದ ಚಿರತೆ ಚಿಕಿತ್ಸೆ ಫಲಕಾರಿಯಾಗದೇ ಬನ್ನೇರುಘಟ್ಟದಲ್ಲಿ ಮೃತಪಟ್ಟಿದೆ.
ಡಿ.28ರ ಬೆಳಿಗ್ಗೆ 7.45ರಲ್ಲಿವಾಹನವೊಂದು ಚಿರತೆ ಸೋಂಟದ ಮೇಲೆ ಹರಿದಿತ್ತು. ಈ ಹಿನ್ನೆಲೆ 11 ವರ್ಷದ ಹೆಣ್ಣು ಚಿರತೆ ಹಿಂಬದಿಯ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಇದನ್ನು ನೋಡಿದ ವಾಯು ವಿಹಾರಿಗಳು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು, ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದರು. ಡಾ.ವಿ.ಉಮಾಶಂಕರ್ ಅವರು ಚಿರತೆಗೆ ಚಿಕಿತ್ಸೆ ನೀಡಿದ್ದರು. ತೀವ್ರ ನೋವಿನಿಂದ ಬಳಲುತ್ತಿದ್ದ ಚಿರತೆ ಆಹಾರ ತ್ಯಜಿಸಿದ ಕಾರಣ ಗ್ಲೂಕೋಸ್ ನೀಡಲಾಗುತ್ತಿತ್ತು.
ಇನ್ನು ಚಿರತೆಯ ಸೋಂಟದ ಭಾಗವನ್ನು ಸ್ಕ್ಯಾನಿಂಗ್ ಮಾಡಿ ಪರಿಶೀಲಿಸಿದಾಗ ಸೊಂಟದ ಮೂಳೆ ಛಿದ್ರಗೊಂಡಿರುವುದು ಕಂಡು ಬಂದಿದೆ. ಆದರೂ ಚಿಕಿತ್ಸೆ ಮುಂದುವರೆಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವಿಗೀಡಾಗಿದೆ.