ಮೈಸೂರು: ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚುತ್ತಿದೆ. ಇದೀಗ ತಿ.ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಮನೆಯ ಜಗಲಿಯಲ್ಲಿ ಮಲಗಿದ್ದ ವೃದ್ಧನ ಮೇಲೆ ಚಿರತೆ ದಾಳಿ ಮಾಡಿದೆ. ಮಹದೇವಯ್ಯ (55) ದಾಳಿಗೊಳಗಾದ ವ್ಯಕ್ತಿ.
ಕರೋಹಟ್ಟಿ ಗ್ರಾಮದ ನಿವಾಸಿಯಾದ ಮಹದೇವಯ್ಯನವರು ಮುತ್ತತ್ತಿ ಗ್ರಾಮದಲ್ಲಿರುವ ಮಗಳ ಮನೆಗೆ ಬಂದು ರಾತ್ರಿ ಜಗುಲಿ ಮೇಲೆ ಮಲಗಿದ್ದರು. ಈ ವೇಳೆ ಚಿರತೆ ದಾಳಿ ಮಾಡಿದ್ದು, ಕಾಲಿಗೆ ಕಚ್ಚಿದೆ. ಕೂಡಲೇ ಮಹದೇವಯ್ಯ ತಾವು ಹೊದ್ದುಕೊಂಡಿದ್ದ ರಗ್ಗನ್ನು ಚಿರತೆ ಮೇಲೆ ಎಸೆದು ಗಾಬರಿಯಿಂದ ಪರಾರಿಯಾಗಿದ್ದಾರೆ. ಸದ್ಯಕ್ಕೆ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ತಾಲೂಕಿನಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಮೈಮೇಲೆ ಎರಗಿದ ಚಿರತೆಗೆ ಕುಡುಗೋಲಿನಿಂದ ಏಟು.. ಪ್ರಾಣ ಉಳಿಸಿಕೊಂಡ ಭೂಪತಿ ಗಂಡು
ಇನ್ನು ಕಳೆದ ನಾಲ್ಕು ದಿನಗಳ ಹಿಂದಷ್ಟೇ ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ನಡೆದಿತ್ತು. ಗೊರವನಹಳ್ಳಿ ಗ್ರಾಮದ ರೈತ ನಿಂಗೇಗೌಡ ಕಬ್ಬಿನ ಗದ್ದೆ ತರಗಿಗೆ ಬೆಂಕಿ ಹಾಕುತ್ತಿದ್ದ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿತ್ತು. ಬಳಿಕ ದಾಳಿಯಿಂದ ತಪ್ಪಿಸಿಕೊಳ್ಳಲು ರೈತ ಕೈಯಲ್ಲಿದ್ದ ಕುಡುಗೋಲಿನಿಂದ ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ತಿ.ನರಸೀಪುರ: ತಾಯೂರಿನ ಬಳಿ ಚಿರತೆ ಓಡಾಟ-ವಿಡಿಯೋ
ಈ ತಿಂಗಳ ಪ್ರಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನ ಹುಂಡಿಯ 5 ಕಿ.ಮೀ.ಅಂತರದಲ್ಲಿರುವ ತಾಯೂರು ಗ್ರಾಮದ ರಸ್ತೆಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿತ್ತು. ರಾತ್ರಿ ವೇಳೆ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದವರು ಮೊಬೈಲ್‌ನಲ್ಲಿ ಚಿರತೆ ಸೆರೆ ಹಿಡಿದಿದ್ದರು.
ಇದನ್ನೂ ಓದಿ: ಮೈಸೂರು: ಮೊಬೈಲ್ನಿಂದ ಹೊಡೆದು ಚಿರತೆ ಬಾಯಿಯಿಂದ ಪಾರಾದ ಯುವಕ!