ಮೈಸೂರು: ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನೆಪ್ರೋ, ಯುರಾಲಜಿ ಸಂಸ್ಥೆಯಲ್ಲಿ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವ ಸಲುವಾಗಿ ಹೋಲ್‌ಮಿಯಮ್ 35 ವ್ಯಾಟ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದೆ ಎಂದು ರಾಜ್ಯ ನೆಪ್ರೋ, ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಆರ್. ಕೇಶವಮೂರ್ತಿ ತಿಳಿಸಿದರು.
ಬುಧವಾರ ಇಲ್ಲಿನ ನೆಪ್ರೋ, ಯುರಾಲಜಿ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿ, ಹೋಲ್‌ಮಿಯಮ್ ಲೇಸರ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೇಸರ್ ಯಂತ್ರದಿಂದ ಶರೀರದಲ್ಲಿ ಯಾವುದೇ ರಂಧ್ರ ಮಾಡದೇ ಲೇಸರ್ ಕಿರಣಗಳ ಮುಖಾಂತರ 2 ಸೆಂ.ಮೀ ಇರುವ ಕಿಡ್ನಿ ಕಲ್ಲುಗಳನ್ನು ಸಂಪೂರ್ಣವಾಗಿ ಚಿಕಿತ್ಸೆ ನೀಡಿ ತೆಗೆದು ಹಾಕಬಹುದು ಎಂದು ಮಾಹಿತಿ ನೀಡಿದರು.
ಈ ಯಂತ್ರವು ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲೇ ಪ್ರಥಮ ಲೇಸರ್ ಯಂತ್ರವಾಗಿದ್ದು, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಪಡೆಯಲು 60 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ವೆಚ್ಚವಾಗುತ್ತದೆ.
ಇದನ್ನೂ ಓದಿ:ಸರ್ಕಾರಿ ವ್ಯವಸ್ಥೆಯಡಿಯ 2ನೇ ಮಿಲ್ಕ್ ಬ್ಯಾಂಕ್ ಕಾರ್ಯಾರಂಭಕ್ಕೆ ದಿನಗಣನೆ: ತಾಯಿ ಹಾಲು ವಂಚಿತ ಹಸುಗೂಸುಗಳಿಗೆ ಸಂಜೀವಿನಿ
ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸಂಪೂರ್ಣ ಚಿಕಿತ್ಸೆ ಉಚಿತವಾಗಿರಲಿದೆ. ಎಪಿಎಲ್ ಕಾರ್ಡ್ ಹೊಂದಿರುವವರು ಶೇ. 70 ರಷ್ಟು ಹಣ ಕಟ್ಟಬೇಕು. ಉಳಿದ ಶೇ. 30 ರಷ್ಟು ಹಣವನ್ನು ಸರ್ಕಾರ ಭರಿಸುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೋಗಿಗಳಿಗೆ ಉಚಿತವಾಗಿದ್ದು, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಸಹ ಲಭ್ಯವಿರುತ್ತದೆ ಎಂದು ಅವರು ವಿವರ ನೀಡಿದರು.
ನೆಪ್ರೋ, ಯುರಾಲಜಿ ಸಂಸ್ಥೆಗೆ ಮೈಸೂರು ಜಯದೇವ ಆಸ್ಪತ್ರೆ ಪಕ್ಕದಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ. ಜಾಗ ಹಸ್ತಾಂತರದ ನಂತರ 200 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಯುರಾಲಜಿ ಮುಖ್ಯಸ್ಥ ಡಾ.ಜೆ.ಬಿ.ನರೇಂದ್ರ ಮಾತನಾಡಿ, ನಮ್ಮ ಸಂಸ್ಥೆಯ ನಿರ್ದೇಶಕರಾದ ಡಾ.ಕೇಶವಮೂರ್ತಿ ಅವರಿಗೆ ರೋಗಿಗಳ ಮೇಲೆ ಇರುವ ಕಾಳಜಿಯಿಂದ 22 ಲಕ್ಷ ರೂ ಬೆಲೆಬಾಳುವ ಅತ್ಯಾಧುನಿಕ ಲೇಸರ್ ಯಂತ್ರವನ್ನು ಸರ್ಕಾರದಿಂದ ಕೊಡಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಇದುವರೆಗೂ 40 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ, 60 ಸಾವಿರ ರೋಗಿಗಳಿಗೆ ಡಯಾಲಿಸಿನ್ ಮಾಡಲಾಗಿದೆ. 20 ಡಯಾಲಿಸಿನ್ ಯಂತ್ರಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಈ ಹೊಸ ಲೇಸರ್ ಯಂತ್ರದಿಂದ ಮೈಸೂರು ಭಾಗದ ರೋಗಿಗಳಿಗೆ ಅನುಕೂಲವಾಗಿದ್ದು ರೋಗಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ಕೊಟ್ಟರು.